ದಶಕಗಳಿಂದ ಬಗೆ ಹರಿಯದ ರಸ್ತೆ ಸಮಸ್ಯೆ : ಕಾಡು ಪ್ರಾಣಿಗಳ ಹಾವಳಿ ನಡುವೆ ದಿನ ಕಳೆಯುತ್ತಿರುವ ಗ್ರಾಮಸ್ಥರು..!
ಸಿದ್ದಾಪುರ : ನೆಲ್ಯಾಹುದಿಕೇರಿ ವ್ಯಾಪ್ತಿಯ ನಲುವತ್ತೆಕ್ರೆ ಗ್ರಾಮದ 2ನೇ ವಾರ್ಡಿಗೆ ಸೇರಿದ ಕೊಂಗೇರಿ ಬೊಪ್ಪಯ್ಯನವರ ತೋಟದ ಹತ್ತಿರವಿರುವ ಪುಟ್ಟ ಗ್ರಾಮದಲ್ಲಿರುವ ಸುಮಾರು 14ಕ್ಕೂ ಅಧಿಕ ಮನೆಗಳಿದ್ದು, ಇಲ್ಲಿಗೆ ತೆರಳುವ ಕಿರುದಾರಿ ಹಲವಾರು ವರ್ಷಗಳಿಂದ ಅಭಿವೃದ್ಧಿ ಕಾಣದೆ ಹಾಗೆಯೇ ಉಳಿದಿದೆ. ಇದರಿಂದಾಗಿ ಮಳೆಗಾಲದಲ್ಲಿ ಈ ರಸ್ತೆ ಸಂಪೂರ್ಣ ಕೆಸರಿನಿಂದ ಕೂಡಿದ್ದು, ಜನ ಅತ್ತಿತ್ತ ನಡೆದಾಡಲು ಕೂಡ ಅಸಾಧ್ಯವಾದ ರೀತಿಯಲ್ಲಿದೆ.
ಸುಮಾರು 150 ಕ್ಕೂ ಅಧಿಕ ಮಂದಿ ವಾಸವಿರುವ ಇಲ್ಲಿಗೆ ತೆರಳುವ ರಸ್ತೆ ಅಭಿವೃದ್ಧಿಗೆ ಹಲವು ಬಾರಿ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದರು, ಗ್ರಾಮ ಪಂಚಾಯಿತಿ ಆಗಲಿ ಜನ ಪ್ರತಿನಿಧಿಗಳಾಗಿ ಈ ವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ಸ್ಥಳೀಯರು ಇಲ್ಲಿನ ವಿದ್ಯಾರ್ಥಿಗಳು, ವಿಕಲಚೇತನರು, ಕಾರ್ಮಿಕರು ಸೇರಿದಂತೆ ಸಾರ್ವಜನಿಕರು, ಕಾಡುಪ್ರಾಣಿಗಳ ಆತಂಕದ ನಡುವೆ ನಡೆದಾಡಲು ಕೂಡ ಯೋಗ್ಯವಲ್ಲದ ಇದೇ ರಸ್ತೆಯನ್ನೇ ಅವಲಂಬಿಸಬೇಕಾಗಿದೆ.
ಈ ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಿದ್ದು, ಇತ್ತೀಚೆಗಷ್ಟೆ ಕಾಡಾನೆ ದಾಳಿಗೆ ಓರ್ವ ಕಾರ್ಮಿಕ ಮಹಿಳೆ (ಕವಿತಾ) ಗಂಭೀರ ಗಾಯಗೊಂಡು ಮೈಸೂರಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಇದೀಗ ಮನೆಗೆ ಹಿಂತಿರುಗಿರುವ ಉದಾಹರಣೆ ಕೂಡ ಇದೆ.
ಇಲ್ಲಿನ ಹದಗೆಟ್ಟಿರುವ ಕಿರಿದಾದ ರಸ್ತೆಯಲ್ಲಿ ಬಾಡಿಗೆ ವಾಹನಗಳು ಕೂಡ ಬರಲು ನಿರಾಕರಿಸುತ್ತಿದ್ದು, ಅನಾರೋಗ್ಯ ತುರ್ತು ಸಂದರ್ಭಗಳಲ್ಲಿ ಸಮಯಕ್ಕೆ ಸರಿಯಾಗಿ ರೋಗಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲು ಕೂಡ ಜನ ಸಂಕಷ್ಟ ಎದುರಿಸುವಂತಾಗಿದೆ. ಹೀಗಾಗಿ ಸ್ಥಳೀಯ ಶಾಸಕರು, ಸಂಬಂಧಪಟ್ಟ ಇಲಾಖೆ ಇತ್ತ ಗಮನ ಹರಿಸಿ ಇಲ್ಲಿನ ಜನರಿಗೆ ಓಡಾಡಲು ಅನುಕೂಲವಾಗುವಂತಹ ಯೋಗ್ಯ ರಸ್ತೆಯನ್ನು ನಿರ್ಮಿಸಿಕೊಡಬೇಕೆಂಬುದೇ ಸ್ಥಳೀಯ ನಿವಾಸಿಗಳ ಆಗ್ರಹವಾಗಿದೆ.








