Breaking News :

ಮಡಿಕೇರಿ : ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ


ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ


ಮಡಿಕೇರಿ : ಮಾಸಿಕ ಕನಿಷ್ಠ ರೂ.೧೦ ಸಾವಿರ ಗೌರವಧನ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ರಾಜ್ಯದಾದ್ಯಂತ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಇದರ ಭಾಗವಾಗಿ ನಗರದಲ್ಲಿ  ಪ್ರತಿಭಟನೆ ನಡೆಸಲಾಯಿತು.

ನಗರದ ಗಾಂಧಿಮೈದಾನದಲ್ಲಿ ಜಮಾಯಿಸಿದ ಪತ್ರಿಭಟನಾ ನಿರತರು ಮಂಗೇರಿರ ಮುತ್ತಣ್ಣ ವೃತ್ತ, ನಗರ ಪೊಲೀಸ್ ಠಾಣೆ, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತವಾಗಿ ನಗರದ ಬಾಲಭವನ ತಲುಪಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ ಕರ್ನಾಟಕ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಉಪಾಧ್ಯಕ್ಷೆ ಎಂ.ಉಮಾದೇವಿ ಮಾತನಾಡಿ, ಗೌರವ ಧನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಜನವರಿ ತಿಂಗಳಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಈ ಸಂದರ್ಭ ರೂ.೧೫ ಸಾವಿರ ಗೌರವಧನ ನಿಗದಿಪಡಿಸಲು ಆಗ್ರಹಿಸಲಾಗಿತ್ತು. ಅಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ೨೦೨೫ರ ಏಪ್ರಿಲ್ ತಿಂಗಳಿನಿಂದ ಪ್ರತಿ ತಿಂಗಳು ಕನಿಷ್ಠ ರೂ.೧೦ ಸಾವಿರ ನೀಡುವುದಾಗಿ ಘೋಷಿಸಲಾಗಿತ್ತು. ಆದರೆ, ಈವರೆಗೂ ಸರ್ಕಾರ ಆದೇಶ ಹೊರಡಿಸಿಲ್ಲ. ಈ ಹಿನ್ನೆಲೆ ಮತ್ತೆ ಪ್ರತಿಭಟನೆಯ ಹಾದಿ ಹಿಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಭಾಗವಾಗಿ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಏಪ್ರಿಲ್ ತಿಂಗಳಿಂದ ಅನ್ವಯವಾಗುವಂತೆ ಪ್ರತಿ ತಿಂಗಳು ಕನಿಷ್ಠ ರೂ.೧೦ ಸಾವಿರ ಗೌರವಧನ ನೀಡುವ ಬಗ್ಗೆ ರಾಜ್ಯ ಸರ್ಕಾರ ಕೂಡಲೇ ಆದೇಶ ಹೊರಡಿಸಬೇಕು. ಈ ವರ್ಷದ ಬಜೆಟ್‌ನಲ್ಲಿ ಅಂಗನವಾಡಿ ಹಾಗೂ ಬಿಸಿಯೂಟ ಕಾರ್ಯಕರ್ತೆಯರಿಗೆ ತಿಂಗಳ ಪ್ರೋತ್ಸಾಹ ಧನ ರೂ.೧ ಸಾವಿರ ಹೆಚ್ಚಿಸಿದಂತೆ, ಆಶಾ ಕಾರ್ಯಕರ್ತೆಯರಿಗೂ ಹೆಚ್ಚಿಸಬೇಕು. ಆಶಾಗಳ ಕಾರ್ಯನಿರ್ವಹಣೆ ಬಗ್ಗೆ ಅವೈಜ್ಞಾನಿಕ ಮೌಲ್ಯಮಾಪನವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ತೆಕ್ಕಡೆ ಪೂರ್ಣಿಮ ಬಸಪ್ಪ ಮಾತನಾಡಿ, ಆಶಾ ಕಾರ್ಯಕರ್ತೆಯರ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಈಗಿರುವ ಜನಸಂಖ್ಯಾ ಮಿತಿಯನ್ನು ಹೆಚ್ಚಿಸಬೇಕು. ಆಶಾ ಕಾರ್ಯಕರ್ತೆಯರನ್ನು ಕಾರಣವಿಲ್ಲದೇ ಕೆಲಸದಿಂದ ತೆಗೆಯಬಾರದು. ನಿವೃತ್ತ ಆಶಾಗಳಿಗೆ ಪಶ್ಚಿಮ ಬಂಗಾಳದ ಮಾದರಿಯಲ್ಲಿ ಇಡಿಗಂಟು ಇಡಬೇಕು. ನಗರದ ಆಶಾಗಳಿಗೆ ಗೌರವ ಧನವನ್ನು ರೂ.೨ ಸಾವಿರ ಹೆಚ್ಚಿಸಬೇಕು ಎಂದು ಒತ್ತಾಯಿಸಿದ ಅವರು, ಕಳೆದ ೧೫ ವರ್ಷಗಳಿಂದ ತಳ ಹಂತದಲ್ಲಿ ನಿಷ್ಠೆಯಿಂದ ಕೆಲಸ ನಿರ್ವಹಿಸಿದ್ದಾರೆ. ಆದರೆ, ಆಶಾ ಕಾರ್ಯಕರ್ತೆಯರ ಗೋಳು ಯಾರಿಗೂ ಬೇಡವಾಗಿದೆ. ಆಳುವ ಸರ್ಕಾರ ನಮ್ಮ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಕಿಡಿಕಾರಿದ ಅವರು, ಬೆಳಗ್ಗಿನಿಂದ ಸಂಜೆಯವರೆಗೆ ಬಾಲಭವನದಲ್ಲಿ ಮೂರು ದಿನ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಸೋಮವಾರಪೇಟೆ ತಾಲೂಕು ಅಧ್ಯಕ್ಷೆ ಶಾಂತಿ, ವಿರಾಜಪೇಟೆ ತಾಲೂಕು ಅಧ್ಯಕ್ಷೆ ಸುಮನ್, ಜಿಲ್ಲಾ ಕಾರ್ಯದರ್ಶಿ ನಾಗಮಣಿ, ಜಿಲ್ಲಾ ಸಂಚಾಲಕ ಸುನಿಲ್, ಆಶಾ ಕಾರ್ಯಕರ್ತೆಯರಾದ ವನಿತಾ, ಶ್ರೀಮತಿ ಸೇರಿದಂತೆ ೩೦೦ಕ್ಕೂ ಅಧಿಕ ಸಂಖ್ಯೆಯಲ್ಲಿ ಆಶಾ ಕಾರ್ಯಕರ್ತೆಯರು ಇದ್ದರು.

Share this article

ಟಾಪ್ ನ್ಯೂಸ್

More News