ಪರಮಾಣು ಬೆದರಿಕೆಯನ್ನು ಭಾರತ ಎಂದಿಗೂ ಸಹಿಸಲ್ಲ : ಪಾಕಿಸ್ತಾನಕ್ಕೆ ಪ್ರಧಾನಿ ಎಚ್ಚರಿಕೆ –
12ನೇ ಬಾರಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಮೋದಿ ಸಂದೇಶ
ನವದೆಹಲಿ : 79ನೇಯ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯಲ್ಲಿ ಸತತ 12ನೇ ಬಾರಿಗೆ ತ್ರಿವರ್ಣ ಧ್ವಜ ಹಾರಿಸಿದರು.
ಬಳಿಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ನಡೆಸಿದ ಆಪರೇಷನ್ ಸಿಂಧೂರ್‌ನಲ್ಲಿ ಸಾಹಸ ತೋರಿಸಿದ ದೇಶದ ಧೈರ್ಯಶಾಲಿ ಸೈನಿಕರಿಗೆ ಅವರು ನಮಸ್ಕರಿಸಿದರು. ಧೈರ್ಯಶಾಲಿ ಸೈನಿಕರಿಗೆ ನಮಸ್ಕರಿಸಲು ನನಗೆ ಅವಕಾಶ ಸಿಕ್ಕಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡ ಪ್ರಧಾನಿ ಭಾರತವು ಯಾವುದೇ ಪರಮಾಣು ಬೆದರಿಕೆಗಳನ್ನು ಸಹಿಸುವುದಿಲ್ಲ ಎಂದು ಪಾಕಿಸ್ತಾನಕ್ಕೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ.
ಸೇನಾ ಪಡೆಗಳಿಗೆ ಪೂರ್ಣ ಸ್ವಾತಂತ್ರ್ಯ:
ನಮ್ಮ ಸೈನಿಕರು ಶತ್ರುಗಳಿಗೆ ಕಲ್ಪನೆಗೂ ಮೀರಿದ ಭೀಕರ ಹೊಡೆತ ನೀಡಿದ್ದಾರೆ. ಪಹಲ್ಗಾಮ್‌ನಲ್ಲಿ ಧರ್ಮದ ಹೆಸರಿನಲ್ಲಿ ದಾಳಿ ಮಾಡಿದ ಭಯೋತ್ಪಾದಕರಿಗೆ ನಾವು ಬಲವಾದ ಪಾಠ ಕಲಿಸಿದ್ದೇವೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಆಪರೇಷನ್ ಸಿಂಧೂರ್ ಉತ್ತರವಾಗಿದೆ. ಆಪರೇಷನ್ ಸಿಂಧೂರ್‌ನಲ್ಲಿ ನಾವು ಮೂರು ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೆವು. ಗುರಿ ಮತ್ತು ಸಮಯದ ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನಾವು ಮೂರೂ ಪಡೆಗಳಿಗೆ ಕೊಟ್ಟಿದ್ದೇವೆ” ಎಂದು ಮೋದಿ ಹೇಳಿದರು.
ಪರಮಾಣು ಬೆದರಿಕೆಗಳನ್ನು ಸಹಿಸಲ್ಲ :
ಭಯೋತ್ಪಾದನೆ ಮತ್ತು ಭಯೋತ್ಪಾದನೆಯನ್ನು ಬೆಂಬಲಿಸುವವರನ್ನು ನಾವು ಪ್ರತ್ಯೇಕವಾಗಿ ನೋಡುವುದಿಲ್ಲ ಎಂದು ಪುನರುಚ್ಚರಿಸಿದ ಮೋದಿ ಯಾವುದೇ ರೀತಿಯ ಭಯೋತ್ಪಾದನೆಯನ್ನು ಸಹಿಸಲಾಗುವುದಿಲ್ಲ. ಅಲ್ಲದೆ, ಭಾರತವು ಪರಮಾಣು ಬೆದರಿಕೆಗಳನ್ನು ಎಂದಿಗೂ ಸಹಿಸುವುದಿಲ್ಲ ಎಂದು ಅಣ್ವಸ್ತ್ರ ಬೆದರಿಕೆವೊಡ್ಡುತ್ತಿರುವ ಪಾಕಿಸ್ತಾನಕ್ಕೆ ನೇರವಾಗಿಯೇ ಎಚ್ಚರಿಕೆ ನೀಡಿದರು. ಶತ್ರುವನ್ನು ಯಾವಾಗ ಮತ್ತು ಹೇಗೆ ನಾಶ ಮಾಡಬೇಕೆಂದನ್ನು ನಮ್ಮ ಸೈನ್ಯವು ನಿರ್ಧರಿಸುತ್ತದೆ. ನಮ್ಮ ಗುರಿ ತಲುಪಲು ಸೇನೆಯೇ ಎಲ್ಲ ನಿರ್ಧಾರ ಮಾಡುತ್ತದೆ ಎಂದು ಅವರು ತಿಳಿಸಿದರು
ಏಪ್ರಿಲ್ 22ರಂದು, ಪಹಲ್ಗಾಮ್‌ನಲ್ಲಿ ಗಡಿ ದಾಟಿದ ಭಯೋತ್ಪಾದಕರು ನರಮೇಧವನ್ನು ಎಸಗಿದರು. ಜನರ ಧರ್ಮದ ಬಗ್ಗೆ ಕೇಳುವ ಮೂಲಕ ಅನೇಕರನ್ನು ಕೊಂದರು. ಗಂಡಂದಿರನ್ನು ಅವರ ಹೆಂಡತಿಯರ ಮುಂದೆಯೇ ಬಂದೂಕಿನಿಂದ ಗುಂಡು ಹಾರಿಸಿದರು. ಮಕ್ಕಳ ಎದುರಲ್ಲೇ ಅವರ ತಂದೆಯರನ್ನು ಕೊಂದರು. ಈ ಭಯೋತ್ಪಾದಕ ದಾಳಿಯಿಂದ ಇಡೀ ದೇಶವು ಆಕ್ರೋಶಗೊಂಡಿತು. ಆ ಆಕ್ರೋಶದಿಂದ ಆಪರೇಷನ್ ಸಿಂಧೂರ್ ಹೊರಹೊಮ್ಮಿತು. ಏಪ್ರಿಲ್ 22ರ ನಂತರ, ನಾವು ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ್ದೇವೆ. ನಮ್ಮ ಸೇನೆಯು ದಶಕಗಳಲ್ಲಿ ಮಾಡದ ಕೆಲಸವನ್ನು ಮಾಡಿದೆ. ಅದು ಶತ್ರುಗಳ ಪ್ರದೇಶಕ್ಕೆ ನೂರಾರು ಕಿಲೋಮೀಟರ್ ಮುನ್ನಡೆದು ಭಯೋತ್ಪಾದಕ ಶಿಬಿರಗಳನ್ನು ನೆಲಕ್ಕೆ ಧ್ವಂಸ ಮಾಡಿತು. ಈ ದಾಳಿಯಿಂದ ಪಾಕಿಸ್ತಾನ ಇನ್ನೂ ನಿದ್ರಿಸುತ್ತಿಲ್ಲ. ಪಾಕಿಸ್ತಾನದಲ್ಲಿ ಆಗಿರುವ ದೊಡ್ಡ ಹಾನಿಯ ಬಗ್ಗೆ ಪ್ರತಿದಿನ ಹೊಸ ಮಾಹಿತಿಗಳು ಹೊರಬರುತ್ತಿವೆ ಎಂದು ಹೇಳಿದ್ದಾರೆ.
2047 ಈಗ ದೂರವಿಲ್ಲ: ನಾನು ನಿಮ್ಮೊಂದಿಗಿದ್ದೇನೆ, ನಿಮಗಾಗಿ ಕೆಲಸ ಮಾಡಲು ನಿಂತಿದ್ದೇನೆ. ಯುವಕರೇ ಮುಂದೆ ಬನ್ನಿ. ಸರ್ಕಾರದ ನೀತಿಗಳಲ್ಲಿ ಬದಲಾವಣೆಗಳು ಬೇಕಿದ್ದರೆ, ನನಗೆ ಹೇಳಿ. ದೇಶವು ನಿಂತಲ್ಲೇ ನಿಲ್ಲಲು ಬಯಸುವುದಿಲ್ಲ. 2047 ನಮಗೆ ಈಗ ಬಹಳ ದೂರವಿಲ್ಲ ಎಂದ ಪ್ರಧಾನಿ ಮೋದಿ, ಮಹಿಳಾ ಸ್ವ-ಸಹಾಯ ಗುಂಪುಗಳ ಕಾರ್ಯವನ್ನು (SHGs) ಶ್ಲಾಘಿಸಿದರು. ಮಹಿಳಾ ಸ್ವಸಹಾಯ ಗುಂಪುಗಳು ಅದ್ಭುತಗಳನ್ನು ಮಾಡುತ್ತಿವೆ. ಉದ್ಯಮಶೀಲತೆ ಮತ್ತು ರಫ್ತುಗಳಲ್ಲಿ ಸಾಕಷ್ಟು ಮುಂದಕ್ಕೆ ಸಾಗಿದ್ದಾರೆ. ಮಹಿಳೆಯರು ತಯಾರಿಸಿರುವ ಉತ್ಪನ್ನಗಳು ಈಗ ಅಂತರಾಷ್ಟ್ರೀಯ ಮಾರುಕಟ್ಟೆಗಳನ್ನು ತಲುಪುತ್ತಿವೆ. ಲಕ್ಷಾಂತರ ಕೋಟಿ ಮೌಲ್ಯದ ವ್ಯವಹಾರಗಳು ನಡೆಯುತ್ತಿದೆ ಎಂದರು.
ರೈತರನ್ನು ಸ್ಮರಿಸಿದ ಮೋದಿ : ದೇಶದ ಸ್ವಾತಂತ್ರ್ಯಕ್ಕಾಗಿ ಲೆಕ್ಕವಿಲ್ಲದಷ್ಟು ಜನರು ಪ್ರಾಣ ತ್ಯಾಗ ಮಾಡಿದರು. ತಮ್ಮ ಯೌವನದ ದಿನಗಳನ್ನು ಜೈಲುಗಳಲ್ಲಿ ಕಳೆದರು. ಗುಲಾಮಗಿರಿಯ ಸರಪಳಿಗಳನ್ನು ಮುರಿಯಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಗುಲಾಮಗಿರಿಯು ನಮ್ಮನ್ನು ಬಡವರನ್ನಾಗಿ, ಅವಲಂಬಿತರನ್ನಾಗಿ ಮಾಡಿತು. ಆದರೆ ನನ್ನ ದೇಶದ ರೈತರು ತಮ್ಮ ರಕ್ತ ಮತ್ತು ಬೆವರು ಹರಿಸುವ ಮೂಲಕ ದೇಶಕ್ಕೆ ಧಾನ್ಯಗಳನ್ನು ನೀಡಿದರು ಎಂದು ಹೋರಾಟಗಾರರ ತ್ಯಾಗ ಹಾಗೂ ರೈತರ ಶ್ರಮವನ್ನು ಸ್ಮರಿಸಿದರು.








