ಅವರೇಗುಂದದಲ್ಲಿ ಬೃಹತ್ ಹೆಬ್ಬಾವು ರಕ್ಷಣೆ
ಸಿದ್ದಾಪುರ : ಮಾಲ್ದಾರೆ ವ್ಯಾಪ್ತಿಯ ಅವರೇಗುಂದ ಗ್ರಾಮದಲ್ಲಿ ಕಾಣಿಸಿಕೊಂಡ ಬೃಹತ್ ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯಕ್ಕೆ ಬಿಡುವಲ್ಲಿ ಉರಗ ರಕ್ಷಕ ಸುರೇಶ್ ಪೂಜಾರಿ ಹಾಗೂ ಆರ್ ಆರ್ ಟಿ ಸಿಬ್ಬಂದಿ ಶಶಿ ಯಶಸ್ವಿಯಾಗಿದ್ದಾರೆ.
ಗ್ರಾಮದ ಸಮುದಾಯ ಭವನ ಪಕ್ಕದ ಅಂಗನವಾಡಿ ಬಳಿ ಬೃಹತ್ ಗಾತ್ರದ ಹೆಬ್ಬಾವುವೊಂದು ಕಾಣಿಸಿಕೊಂಡಿದೆ. ಹೆಬ್ಬಾವನ್ನು ಪ್ರತಕ್ಷವಾಗಿ ಕಂಡ ಗ್ರಾಮಸ್ಥ ಸಂಪತ್ ಕುಮಾರ್ ತಕ್ಷಣವೇ ಪಂಚಾಯಿತಿ ಸದಸ್ಯ ಮಹೇಶ್ ಕುಮಾರ್ ರವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದ ಕೂಡಲೇ ಆತಂಕಗೊಂಡ ಮಹೇಶ್ ಮಾಲ್ದಾರೆ ವಲಯದ ಅರಣ್ಯಾಧಿಕಾರಿ ಹಂಸ ರವರ ಮುಖಾಂತರ ಆರ್ ಆರ್ ಟಿ. ಸಿಬ್ಬಂದಿ ಶಶಿ ರವರಿಗೆ ಗ್ರಾಮದಲ್ಲಿ ಬೃಹತ್ ಹೆಬ್ಬಾವು ಇರುವ ವಿಚಾರ ತಿಳಿಸಿದರು.
ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಶಶಿ ಮತ್ತು ಉರಗ ರಕ್ಷಕ ಸುರೇಶ್ ಪೂಜಾರಿ ಸುಮಾರು12 ಅಡಿ ಉದ್ದವಿರುವ 42 ಕೆಜಿ ತೂಕದ ಬೃಹತ್ ಹೆಬ್ಬಾವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಮಾಲ್ದಾರೆ ಅರಣ್ಯ ವ್ಯಾಪ್ತಿಯ ಗೆದ್ದಿಗೆ ಬೆಟ್ಟದ ಬಳಿ ಬಿಟ್ಟಿದ್ದಾರೆ.








