ಮೂರ್ನಾಡುವಿನಲ್ಲಿ ಧರ್ಮಸ್ಥಳ ಕ್ಷೇತ್ರದ ವಿರುದ್ಧದ ಅಪಪ್ರಚಾರ ಖಂಡಿಸಿ ಪ್ರತಿಭಟನಾ ಮೆರವಣಿಗೆ
ಜನವಾಹಿನಿ NEWS ಮಡಿಕೇರಿ : ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ವಿರುದ್ಧದ ಅಪಪ್ರಚಾರ ಖಂಡಿಸಿ ಮತ್ತು ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹಂಚುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮೂರ್ನಾಡು ಪಟ್ಟಣದಲ್ಲಿ ಧರ್ಮಸ್ಥಳ ಭಕ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಧರ್ಮಸ್ಥಳ ಭಕ್ತ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಮೆರವಣಿಗೆಯು ಕಾಲೇಜು ಮೈದಾನದಲ್ಲಿ ಪ್ರಾರಂಭಗೊಂಡು ಗಾಂಧಿ ನಗರದ ಮೂಲಕ ಪಟ್ಟಣದ ಮುಖ್ಯ ರಸ್ತೆಯಲ್ಲಿ ಕೊಂಡಂಗೇರಿ ರಸ್ತೆವರೆಗೂ ಸಾಗಿ ಬಳಿಕ ಬಸ್ ನಿಲ್ದಾಣದಲ್ಲಿ ಜಮಾವಣೆಗೊಂಡಿತು. ಮೊಂಬತ್ತಿ ಹಚ್ಚಿ ಮೆರವಣಿಗೆ ಸಾಗಿದ 400 ಕ್ಕೂ ಅಧಿಕ ಸಂಖ್ಯೆಯ ಹಿಂದುಪರ ಕಾರ್ಯಕರ್ತರು ಅಪಪ್ರಚಾರ ಮಾಡುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು.
ಮೆರವಣಿಗೆ ಸಂದರ್ಭ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ವಿರುದ್ಧ ತಪ್ಪು ಮಾಹಿತಿ ಹಂಚುತ್ತಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರಲ್ಲದೆ ಸೌಜನ್ಯಾ ಪ್ರಕರಣವನ್ನು ಬಳಸಿಕೊಂಡು ಹಿಂದೂ ಧರ್ಮಕ್ಕೆ ಧಕ್ಕೆ ತರುವ ಹುನ್ನಾರವನ್ನು ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮ್ಮರೋಡಿ ಸೇರಿದಂತೆ ಕೆಲವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದರು.
ಈ ಸಂದರ್ಭ ಮಾತನಾಡಿ ಪ್ರಮುಖರು, ”ಧಾರ್ಮಿಕ ಕ್ಷೇತ್ರದಲ್ಲಿಧರ್ಮಸ್ಥಳದ ಕಾರ್ಯ ದೊಡ್ಡದು. ಇದನ್ನು ಸಹಿಸದ ಕೆಲ ಶಕ್ತಿಗಳು ಅಪಪ್ರಚಾರ ಮಾಡುತ್ತಿರುವುದಲ್ಲದೇ ವೀರೇಂದ್ರ ಹೆಗ್ಗಡೆ ಅವರ ತೇಜೋವಧೆ ಮಾಡುತ್ತಿರುವುದು ಸರಿಯಲ್ಲ” ಇದು ಹೀಗೆ ಮುಂದುವರೆದಲ್ಲಿ ಹೋರಾಟವನ್ನು ತೀವ್ರ ಗೊಳಿಸಲಾಗುತ್ತದೆ ಹಿಂದು ಬಾಂಧವರು ಕೈಕಟ್ಟಿಕೂರಲ್ಲ ಆದುದ್ದರಿಂದ ಪೊಲೀಸ್ ಇಲಾಖೆ ಅಪಪ್ರಚಾರದಲ್ಲಿ ತೊಡಗಿಸಿಕೊಂಡಿದ್ದವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸದಸ್ಯರು, ಮಹಿಳಾ ಸಂಘಟನೆಯ ಸದಸ್ಯರು ಸೇರಿದಂತೆ ನೂರಾರು ಮಂದಿ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.









