ಜನವಾಹಿನಿ NEWS ಸಿದ್ದಾಪುರ : ಸಿದ್ದಾಪುರ ಪಟ್ಟಣದ ಬಸ್ ನಿಲ್ದಾಣದಲ್ಲಿ ಕಂಡುಬಂದ ಮಾನಸಿಕವಾಗಿ ನೊಂದಿದ್ದ ವೃದ್ಧ ಮಹಿಳೆಯನ್ನು ಸಿದ್ದಾಪುರ ಠಾಣಾಧಿಕಾರಿ ಸಾರ್ವಜನಿಕರ ಸಹಕಾರದೊಂದಿಗೆ ವಿರಾಜಪೇಟೆ ಹೆಗ್ಗಳದಲ್ಲಿರುವ ವೃದ್ಧಾಶ್ರಮಕ್ಕೆ ಸುರಕ್ಷಿತವಾಗಿ ಕಳುಹಿಸಿಕೊಟ್ಟಿದ್ದಾರೆ.
ಸಂಜೆ ಖಾಸಗಿ ಬಸ್ ವೊಂದರಲ್ಲಿ ಪಟ್ಟಣಕ್ಕೆ ಬಂದಿರುವ ಈ ವೃದ್ಧ ಮಹಿಳೆಗೆ ತನ್ನ ಹೆಸರು ಸೀತಮ್ಮ ಟೀಚರ್ ಎಂಬುವುದನ್ನು ಬಿಟ್ಟು ಬೇರೇನೂ ಗೊತ್ತಿಲ್ಲ. ಬಸ್ ನಿಲ್ದಾಣದಲ್ಲಿ ತುಂಬಾ ಸಮಯದಿಂದ ಕುಳಿತ್ತಿದ್ದ ಇವರನ್ನು ಗಮನಿಸಿದ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ವಿಚಾರಿಸಿದ್ದಾರೆ ಈ ಸಂದರ್ಭ ತನ್ನ ಹೆಸರನ್ನು ಮಾತ್ರ ಹೇಳುತ್ತಿರುವ ಇವರಿಗೆ ಬೇರೇನೂ ನೆನಪಿಲ್ಲ. ಇವರ ತಲೆಯ ಭಾಗದಲ್ಲಿ ಗಾಯವಾಗಿದ್ದನು ಗಮನಿಸಿದ ಠಾಣಾಧಿಕಾರಿ ಕೂಡಲೇ ಇವರಿಗೆ ಸ್ಥಳೀಯರ ಸಹಕಾರದೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹಣ್ಣು ಹಂಪಲು ನೀಡಿ ಸುರಕ್ಷಿತವಾಗಿ ಆಶ್ರಮಕ್ಕೆ ಕಳುಹಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಠಾಣಾಧಿಕಾರಿ ಮಂಜುನಾಥ್, ಗೌರವದಿಂದ ನಡೆಸಿಕೊಳ್ಳಬೇಕಾದ ಹೆತ್ತ ತಂದೆ, ತಾಯಿ ಅಥವಾ ಹಿರಿಯರನ್ನು ವಯಸ್ಸಾದ ಕೂಡಲೇ ಯಾರು ಕೂಡ ಬೀದಿ ಪಾಲಾಗಿ ಬಿಡಬೇಡಿ. ಇದು ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಾ ಕೆಲಸ. ತನ್ನ ಕುಟುಂಬ ಮಕ್ಕಳು ಅಂತ ತನ್ನ ಸರ್ವಸ್ವವನ್ನೇ ಮುಡಿಪಾಗಿಟ್ಟು ಬದುಕಿದ್ದ ಜೀವಕ್ಕೊಂದು ಬೆಲೆ ಇದೆ. ನಿಮ್ಮ ಸಂತೋಷಕ್ಕಾಗಿ ಅವರನ್ನು ದೂರ ಮಾಡಬೇಡಿ. ಮೊದಲೇ ನೊಂದಿರುವ ಆ ಜೀವಕ್ಕೆ ಆಸರೆಯಾಗಿರಿ ಎಂದು ನುಡಿದಿದ್ದಾರೆ.







