ಜನವಾಹಿನಿ NEWS ಮಡಿಕೇರಿ : ಕನ್ನಡ ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯ ಪವಿತ್ರ ಬ್ರಹ್ಮ ಕುಂಡಿಕೆಯಲ್ಲಿ ಶುಕ್ರವಾರ ಮಧ್ಯಾಹ್ನ 1.44 ಗಂಟೆಗೆ ಸರಿಯಾಗಿ ತೀರ್ಥರೂಪಿಣಿಯಾಗಿ ಶ್ರೀ ಕಾವೇರಿ ಮಾತೆ ಭಕ್ತಾದಿಗಳಿಗೆ ದರ್ಶನ ನೀಡಿದಳು.
ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾದಿಗಳು ಜೈ ಜೈ ಮಾತಾ, ಕಾವೇರಿ ಮತಾ ಜಯಘೋಷದ ನಡುವೆ ಶ್ರೀ ಕಾವೇರಿ ಮಾತೆ ತೀರ್ಥ ರೂಪಿಣಿಯಾಗಿ ಕಂಡಳು.
ಬೆಳಗ್ಗೆಯಿಂದಲೇ ಪೂಜಾ ವಿಧಿವಿಧಾನಗಳು ಆರಂಭವಾಗಿದ್ದವು, ಭಕ್ತರು ತಂಡೋಪ ತಂಡವಾಗಿ ಆಗಿಮಿಸುತ್ತಿದ್ದು ಕಂಡು ಬಂದಿತ್ತು.
ಮಧ್ಯಾಹ್ನ 1 ಗಂಟೆ ವೇಳೆಗೆ ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಸೇರಿ ಶ್ರೀ ಕಾವೇರಿಮಾತೆಗೆ ಜಯಕಾರ ಜಯಘೋಷಿಸಿ, ತಾಯಿ ಕಾವೇರಿ ಮಾತೆಯ ಮಹತ್ವ ಹಾಗೂ ಭಕ್ತಿ ಪರಾಕಾಷ್ಠೆ ಸಾರಿದರು.
ಪವಿತ್ರ ತೀರ್ಥೋದ್ಭವ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ಶಾಸಕರಾದ ಎ.ಎಸ್.ಪೊನ್ನಣ್ಣ, ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಶಾಸಕರಾದ ಡಾ.ಮಂತರ್ ಗೌಡ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಅರುಣ್ ಮಾಚಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಭಾಗಮಂಡಲ ಗ್ರಾ. ಪಂ. ಅಧ್ಯಕ್ಷರಾದ ಕಾಳನ ರವಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ತಾಲ್ಲೂಕು ಘಟಕದ ಅಧ್ಯಕ್ಷರಾದ ಮೋಹನ್ ದಾಸ್, ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್ ಕುಮಾರ್, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ತಹಶಿಲ್ದಾರ್ ಶ್ರೀಧರ, ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯ ಇಒ ಚಂದ್ರಶೇಖರ, ತಕ್ಕ ಮುಖ್ಯಸ್ಥರಾದ ಬಳ್ಳಡ್ಕ ಅಪ್ಪಾಜಿ, ಕೋಡಿ ಮೋಟಯ್ಯ ಇತರರು ತೀರ್ಥೋದ್ಭವವನ್ನು ಕಣ್ತುಂಬಿಕೊಂಡರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶ್ರೀ ಕಾವೇರಿ ಮಾತೆ ಕುರಿತು ಭಕ್ತಿ ಗೀತಾ ಗಾಯನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಅಧ್ಯಕ್ಷರಾದ ಕೇಶವ ಕಾಮತ್ ಹಾಗೂ ಅಕಾಡೆಮಿ ಅಧ್ಯಕ್ಷರು ಇದ್ದರು.
ಕೊಡಗು ಏಕೀಕರಣ ರಂಗ ವತಿಯಿಂದ ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣಾ ಕಾರ್ಯ ಅಚ್ಚುಕಟ್ಟಾಗಿ ನಡೆಯಿತು.
ಹಾಗೆಯೇ ಚೆಟ್ಟಿಯಾರ್ ವತಿಯಿಂದಲೂ ಪ್ರಸಾದ ವಿನಿಯೋಗ, ಜೊತೆಗೆ ಭಾಗಮಂಡಲದಲ್ಲಿ ಗಜಾನನ ತಂಡದವರಿಂದ ಭಕ್ತಾದಿಗಳಿಗೆ ಪ್ರಸಾದ ನೀಡುವ ಕಾರ್ಯ ನಡೆಯಿತು.
ಭಾಗಮಂಡಲದಿಂದ ತಲಕಾವೇರಿ ವರೆಗೆ ವಿವಿಧ ಕೊಡವ ಸಮಾಜಗಳಿಂದ ಪಾದಯಾತ್ರೆ ನಡೆಯಿತು. ಶಾಸಕರಾದ ಎ.ಎಸ್.ಪೊನ್ನಣ್ಣ, ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ತೀರ್ಥೋದ್ಭವ ನಂತರ ಮಾತನಾಡಿದ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ತಾಯಿ ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ನಿಗದಿತ ಸಮಯಕ್ಕೆ ದರ್ಶನ ನೀಡಿದ್ದಾರೆ. ಇದೊಂದು ಪುಣ್ಯಕ್ಷಣವಾಗಿತ್ತು ಎಂದರು.
ತಾಯಿ ಕಾವೇರಿ ಮಾತೆ ದೇಶಕ್ಕೆ, ನಾಡಿಗೆ, ಜಿಲ್ಲೆಯ ಜನತೆಗೆ ಮತ್ತಷ್ಟು ಸಮೃದ್ದಿ, ಆರೋಗ್ಯ ತರುವಂತಾಗಲಿ ಎಂದು ಎ.ಎಸ್.ಪೊನ್ನಣ್ಣ ಆಶಿಸಿದರು.
ಶಾಸಕರಾದ ಡಾ.ಮಂತರ್ ಗೌಡ ಅವರು ಮಾತನಾಡಿ ತಾಯಿ ಕಾವೇರಿ ಮಾತೆ ಇಡೀ ದಕ್ಷಿಣ ಭಾರತಕ್ಕೆ ಜೀವ ನದಿಯಾಗಿದೆ ಎಂದರು.
ಕಾವೇರಿ ನದಿ ಪಾತ್ರದಲ್ಲಿ ಸ್ವಚ್ಚತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಹೇಳಿದರು.
ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಾತನಾಡಿ ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಜಿಲ್ಲೆಯಲ್ಲಿ ಹಬ್ಬ ಹಾಗೂ ಉತ್ಸವದ ವಾತಾವರಣ ನಿರ್ಮಾಣ ಮಾಡಿದ್ದು, ತೀರ್ಥೋದ್ಭವವನ್ನು ಕಣ್ತುಂಬಿಕೊಳ್ಳುವುದೇ ಒಂದು ರೀತಿ ವಿಸ್ಮಯ ಎಂದರು.
ಭಾಗಮಂಡಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು ಎಂದು ಸಂಸದರು ವಿವರಿಸಿದರು.
ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಹಿನ್ನೆಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಬೆಳಗ್ಗೆಯಿಂದಲೇ ಅಗತ್ಯ ಬಂದೋಬಸ್ತ್ ಮಾಡಿದ್ದರು.
ಕಂದಾಯ, ಪಂಚಾಯತ್ ರಾಜ್, ಆರೋಗ್ಯ, ಸೆಸ್ಕ್, ಪ್ರಾದೇಶಿಕ ಸಾರಿಗೆ ಸೇರಿದಂತೆ ಹಲವು ಇಲಾಖೆಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿನ ಕೆಲಸವನ್ನು ನಿರ್ವಹಿಸಿದ್ದು ಕಂಡುಬಂದಿತು.







