ಬದ್ರಾವ್‌ನ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ನಿಯೋಜನೆಗೊಂಡ 10 ಶಿಕ್ಷಕರು ಬ್ರೇನ್ ಟ್ಯೂಮರ್‌ನಿಂದ ಬಳಲುತ್ತಿರುವ ಆಘಾತಕಾರಿ ಅಂಶ ಬಯಲಾಗಿದೆ. ಘಟನೆಯು ಸರ್ಕಾರದ ಗಮನಕ್ಕೆ ಬಂದ ಬೆನ್ನಲ್ಲೇ ರೇವಾ ಜಿಲ್ಲಾಧಿಕಾರಿ ತನಿಖೆಗೆ ಆದೇಶಿಸಿದ್ದಾರೆ.
2022ರಲ್ಲಿ ಮಧ್ಯಪ್ರದೇಶ ಸರ್ಕಾರವು ಶಿಕ್ಷಕರಿಗೆ ವರ್ಗಾವಣೆ ನೀತಿಯನ್ನು ಅನುಮೋದಿಸಿತ್ತು. ಈ ವೇಳೆ ಹೆಚ್ಚಿನ ಶಿಕ್ಷಕರು ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದೇವೆ ಎಂದು ಹೇಳಿದ್ದರು. ಹೀಗಾಗಿ ಇವರಿಗೆ ವರ್ಗಾವಣೆಯಿಂದ ವಿನಾಯಿತಿ ನೀಡಲಾಗಿತ್ತು. ಬಹುಶಃ ಆ ಸಮಯದಲ್ಲಿಯೇ ಕೆಲವು ಶಿಕ್ಷಕರು ವರ್ಗಾವಣೆಯನ್ನು ತಪ್ಪಿಸಲು ಶಿಕ್ಷಣ ಪೋರ್ಟಲ್‌ನಲ್ಲಿ ಈ ರೀತಿಯ ಮಾಹಿತಿಯನ್ನು ಹಂಚಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.
ಇದೀಗ ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಎಲ್ಲಾ ಶಿಕ್ಷಕರಿಗೂ ತನಿಖೆಗೆ ಆದೇಶಿಸಲಾಗಿದೆ. ಜೊತೆಗೆ ಕೌನ್ಸೆಲಿಂಗ್‌ಗೆ ಬರುವ ಎಲ್ಲಾ ಶಿಕ್ಷಕರನ್ನು ತಮ್ಮ ಗಂಭೀರ ಕಾಯಿಲೆಗಳ ಪರೀಕ್ಷೆಗಾಗಿ ವೈದ್ಯಕೀಯ ಮಂಡಳಿಯ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ. ಈ ವೇಳೆ ಸುಳ್ಳು ಮಾಹಿತಿ ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಈ ಬಗ್ಗೆ ಜಿಲ್ಲಾಧಿಕಾರಿ ರೇವಾ ಪ್ರತಿಭಾ ಪಾಲ್ ಮಾತನಾಡಿ, ಒಂದೇ ಶಾಲೆಯ 10ಕ್ಕೂ ಹೆಚ್ಚು ಶಿಕ್ಷಕರು ತಾವು ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿದ್ದಾರೆ ಎಂದು ಶಿಕ್ಷಣ ಪೋರ್ಟಲ್‌ನಲ್ಲಿ ಅಪ್‌ಡೇಟ್ ಮಾಡಿದ್ದಾರೆ. ಆದರೆ ಜಿಲ್ಲೆಯಲ್ಲಿ ಇನ್ನೂ ಹಲವಾರು ಶಿಕ್ಷಕರು ತೀವ್ರ ಗಂಭೀರ ಕಾಯಿಲೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಆ ಶಿಕ್ಷಕರನ್ನು ವೈದ್ಯಕೀಯ ಮಂಡಳಿಯ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.







