Breaking News :

ಕುಮಾರಸ್ವಾಮಿ ವಿರುದ್ಧ ದೂರು ನೀಡಿ 10 ತಿಂಗಳಾದರೂ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡದ ರಾಜ್ಯಪಾಲರು; ವರದಿ

ಗಣಿ ಅಕ್ರಮ ಪ್ರಕರಣದಲ್ಲಿ 2014ರಿಂದ ವಿಚಾರಣೆ ನಡೆಸಿದ ಲೋಕಾಯುಕ್ತದ ಎಸ್‌ಐಟಿಯು ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲು ರಾಜ್ಯಪಾಲರಿಗೆ 10 ತಿಂಗಳ ಹಿಂದೆಯೇ ಮನವಿ ಮಾಡಿಕೊಂಡಿದೆ, ಆದರೆ ಅವರು ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ವರದಿಯಾಗಿದೆ.

ದಿನಾಂಕ 10/9/2014ರ ಕ್ರೈಮ್‌ ನಂ. 16/14 ಈ ಕೇಸಿನಲ್ಲಿ ಲೋಕಾಯುಕ್ತದ ಅಡಿಯಲ್ಲಿ ಗಣಿ ಅಕ್ರಮಗಳ ತನಿಖೆ ನಡೆಸುತ್ತಿರುವ ಎಸ್‌ಐಟಿ ವತಿಯಿಂದ ರಾಜ್ಯಪಾಲರಿಗೆ ಪತ್ರ ಕಳುಹಿಸಲಾಗಿದೆ. 21/11/2023ರಂದು ಲೋಕಾಯುಕ್ತದ ಎಡಿಜಿಪಿ ಚಂದ್ರಶೇಖರ್‌ ಅವರೇ ಖುದ್ದಾಗಿ ಪತ್ರವನ್ನು ಕಳುಹಿಸಿದ್ದಾರೆ.

ಸಾಯಿ ವೆಂಕಟೇಶ್ವರ ಮಿನರಲ್ಸ್‌ ಎಂಬ ಬೋಗಸ್‌ ಸಂಸ್ಥೆಗೆ ಎಚ್‌.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ 6.10.2007ರಂದು ಬಳ್ಳಾರಿಯ ಸಂಡೂರು ತಾಲೂಕಿನ ಭಾವಿಹಳ್ಳಿ, ತಿಮ್ಮಪ್ಪಗುಡಿಯಲ್ಲಿ 550 ಎಕರೆ ಜಾಗವನ್ನು ಗಣಿಗಾರಿಕೆಗೆ ಅಕ್ರಮವಾಗಿ ಗುತ್ತಿಗೆಗೆ ನೀಡಿದ ಆರೋಪ ಕುಮಾರಸ್ವಾಮಿಯವರ ಮೇಲಿತ್ತು. ಸದರಿ ಗುತ್ತಿಗೆ ನೀಡುವಾಗ ಮಿನರಲ್ಸ್‌ ಕನ್ಸಿಷನ್‌ ನಿಯಮ 59 (2)ನ್ನು ಉಲ್ಲಂಘಿಸಿ ಕುಮಾರಸ್ವಾಮಿಯವರು ಮಂಜೂರು ಮಾಡಿದ್ದರು ಎಂದು ಹೇಳಲಾಗಿತ್ತು.

ಈ ಅಕ್ರಮದ ಕುರಿತಾಗಿ ಎಫ್‌ಐಆರ್‌ ದಾಖಲಾಗಿ ಲೋಕಾಯುಕ್ತದ ಎಸ್‌ಐಟಿಯು ತನಿಖೆಯನ್ನು ಕೈಗೆತ್ತಿಕೊಂಡಿತ್ತು. ಕುಮಾರಸ್ವಾಮಿಯವರ ಮೇಲೆ ತನಿಖೆ ಮುಗಿದು ಚಾರ್ಜ್‌ಶೀಟ್‌ ಸಹ ಆಗಿದೆ. ಅವರು ತಪ್ಪಿತಸ್ಥರೆಂದೇ ಲೋಕಾಯುಕ್ತ ಎಸ್‌ಐಟಿಗೆ ಮನವರಿಕೆಯೂ ಆಗಿದೆ. ಆದರೂ ರಾಜ್ಯಪಾಲರು ಅನುಮತಿ ನೀಡಿಲ್ಲ ಎಂದು ವರದಿಯಾಗಿದೆ.

ಸಿದ್ದರಾಮಯ್ಯನವರ ವಿಚಾರದಲ್ಲಿ ದೂರುದಾರರೊಬ್ಬರ ದೂರನ್ನಷ್ಟೇ ಆಧರಿಸಿ ಕೇವಲ ಒಂದು ದಿನದಲ್ಲಿ ರಾಜ್ಯಪಾಲರು ಶೋಕಾಸ್‌ ನೋಟೀಸ್‌ ನೀಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.

 

 

Share this article

ಟಾಪ್ ನ್ಯೂಸ್

More News