ಜನವಾಹಿನಿ News ಮಡಿಕೇರಿ : ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಕೊಡವ ಕುಟುಂಬಗಳ ನಡುವಿನ ೨೪ನೇ ವರ್ಷದ ಕೌಟುಂಬಿಕ ಕ್ರಿಕೆಟ್ ಉತ್ಸವಕ್ಕೆ ಬೇತ್ರಿ ಮುಕ್ಕಾಟಿರ ಕುಟುಂಬಸ್ಥರು ಸಿದ್ಧತೆಗೆ ಮುಂದಾಗಿದ್ದು, .ಏ೨ರಿಂದ ಪಂದ್ಯಾಟ ಆರಂಭವಾಗಲಿದೆ ಎಂದು ಮುಕ್ಕಾಟಿರ ಕಪ್ ಕ್ರಿಕೆಟ್ ಉತ್ಸವ ಸಮಿತಿ ಅಧ್ಯಕ್ಷ ಎಂ.ಸುರೇಶ್ ತಿಳಿಸಿದ್ದಾರೆ.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೨೬ರ ಕ್ರಿಕೆಟ್ ಉತ್ಸವದ ಜವಾಬ್ದಾರಿಯನ್ನು ಬೇತ್ರಿ ಮುಕ್ಕಾಟಿರ ಕುಟುಂಬಸ್ಥರು ಹೊತ್ತಿದ್ದು, ಏ.೨ರಿಂದ ೨೮ ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಉತ್ಸವ ಸಮಿತಿಯನ್ನು ರಚಿಸಿದ್ದು, ಹಲವು ಸಭೆಗಳನ್ನು ನಡೆಸಲಾಗಿದೆ. ಈ ಬಾರಿ ೩ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಆರಂಭಿಕ ಸುತ್ತಿನ ಪಂದ್ಯಗಳಿಗೆ ಅರಮೇರಿ ಕಳಂಚೇರಿಯ ಎಸ್‌ಎಂಎಸ್ ವಿದ್ಯಾಪೀಠದ ಮೈದಾನ ಮತ್ತು ಮುಖ್ಯ ಮೈದಾನವಾಗಿ ಮೂರ್ನಾಡಿನ ಬಾಚೆಟ್ಟಿರ ಲಾಲೂ ಮುದ್ದಯ್ಯ ಕ್ರೀಡಾಂಗಣವನ್ನು ಬಳಸಿಕೊಳ್ಳಲಾಗುತ್ತಿದೆ. ಒಟ್ಟು ೩೦೦ಕ್ಕೂ ಅಧಿಕ ಕುಟುಂಬಗಳು ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಮಹಿಳೆಯರಿಗೆ ನಡೆಯುವ ಕ್ರಿಕೆಟ್ ಪಂದ್ಯಾಟದಲ್ಲಿ ೧೦೦ಕ್ಕೂ ಅಧಿಕ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಕ್ರಿಕೆಟ್ ಉತ್ಸವದ ಸಂದರ್ಭ ವಿವಿಧ ಕಾರ್ಯಕ್ರಮಗಳ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಚಿಂತನೆ ನಡೆಸಲಾಗಿದೆ. ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾನ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮುಕ್ಕಾಟಿರ ಕಪ್ ಕ್ರಿಕೆಟ್ ಉತ್ಸವ ಸಮಿತಿ ಕಾರ್ಯದರ್ಶಿ ಮುಕ್ಕಾಟಿರ ಪೊನ್ನಣ್ಣ, ಜಂಟಿ ಖಜಾಂಚಿ ಮುಖೇಶ್ ಅಯ್ಯಪ್ಪ, ವಕ್ತಾರ ರವಿ ಚೀಯಣ್ಣ ಉಪಸ್ಥಿತರಿದ್ದರು.







