Breaking News :

ಚಿಕಿತ್ಸೆಗೆ ಪ್ರಥಮ ಆದ್ಯತೆ ನೀಡಿ ಬಿಲ್ ಬಗ್ಗೆ ನಂತರ ಗಮನ ಹರಿಸಿ : ಜಿಲ್ಲಾಸ್ಪತ್ರೆಯ ಸಿಬ್ಬಂದಿಗಳಿಗೆ ಶಾಸಕ ಪೊನ್ನಣ್ಣ ಖಡಕ್ ಸೂಚನೆ

 


ಜನವಾಹಿನಿ News ಮಡಿಕೇರಿ : ಸರ್ಕಾರಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ತಕ್ಷಣವೇ ಚಿಕಿತ್ಸೆ ನೀಡಿ. ಬಿ.ಪಿ.ಎಲ್ ಅಥವಾ ಎ.ಪಿ.ಎಲ್ ನವರು ಎಂದು ನಂತರ ಮಾಹಿತಿ ಪಡೆದು ಬಿಲ್ ಬಗ್ಗೆ ನಿರ್ಧರಿಸಿ ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ( ಕೊಡಗು ಜಿಲ್ಲಾಸ್ಪತ್ರೆ) ನಿರ್ದೇಶಕರಿಗೆ ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಖಡಕ್ ಸೂಚನೆ ನೀಡಿದ್ದಾರೆ.

ಆಕಸ್ಮಿಕ ಪಟಾಕಿ ಸಿಡಿತದಿಂದ ಬೆರಳು ಕಳೆದುಕೊಂಡು ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿರುವ ಗೋಣಿಕೊಪ್ಪದ ಶಾಲಾ ಬಾಲಕ ಪವನ್ ಆರೋಗ್ಯ ವಿಚಾರಿಸಲು ಪೊನ್ನಣ್ಣ ನವರು ಆಸ್ಪತ್ರೆಗೆ ಬಂದಾಗ ಪರಿಶಿಷ್ಟ ಪಂಗಡದ ಬಡ ಕುಟುಂಬದ ಪವನ್ ನನ್ನು ಆಸ್ಪತ್ರೆಗೆ ದಾಖಲಿಸುವ ಸಂಧರ್ಭದಲ್ಲಿ ದಾಖಲಾತಿ ಇಲ್ಲದೆ ಇದ್ದುದರಿಂದ ಎ.ಪಿ.ಎಲ್ ಎಂದು ನಿರ್ಧರಿಸಿ ಬಿಲ್ ಕಟ್ಟಿಸಲಾಗಿತ್ತು.

ನಂತರ ಶಾಲ ದಾಖಲಾತಿಯನ್ನು ಸಲ್ಲಿಸಲಾಗಿತ್ತು ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ರವರು ಶಾಸಕರ ಗಮನಕ್ಕೆ ತಂದರು.

ತುರ್ತು ಸಂಧರ್ಭದಲ್ಲಿ ಬಡ ರೋಗಿಗಳು ಹಣವಿಲ್ಲದೆ ದಾಖಲೆಗಳನ್ನು ಜೊತೆಯಲ್ಲಿ ತರದೇ ಇದ್ದರೆ ಚಿಕಿತ್ಸೆ ಪಡೆಯಲು ವಿಳಂಬವಾಗಿ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಹಾಗಾಗಿ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಸೂಚನೆ ನೀಡಿದರು.

ಆಸ್ಪತ್ರೆಯ ಶುಚಿತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕರು ಚಿಕಿತ್ಸೆ ಯಲ್ಲಿಯೂ ಗುಣಮಟ್ಟ ಇರಬೇಕು ಎಂದು ವೈದ್ಯರಿಗೆ ಕಿವಿ ಮಾತು ಹೇಳಿದರು.

ಶಾಸಕರು ಆಸ್ಪತ್ರೆಗೆ ಭೇಟಿ ನೀಡಿದ ಸಂಧರ್ಭದಲ್ಲಿ ಮೆಡಿಕಲ್ ಕಾಲೇಜು ಡೀನ್ ಡಾ ಲೋಕೇಶ್ ಕುಮಾರ್, ಆರ್.ಎಂ. ಡಾ ಅಭಿನಂದನ್ ಮುಖಂಡರಾದ ತೆನ್ನಿರ ಮೈನಾ, ಅಪ್ರು ರವೀಂದ್ರ, ಸೂರಜ್ ಹೊಸೂರು, ಪ್ರಭುರೈ, ಪಿ.ಎಲ್.ಸುರೇಶ್, ಹನಿಫ್ ಸಂಪಾಜೆ, ವಿಕಾಶ್, ಸೇರಿದಂತೆ ಇತರರು ಉಪಸ್ಥಿತರಿದ್ದರು.

Share this article

ಟಾಪ್ ನ್ಯೂಸ್

More News