ಜನ ಸುರಕ್ಷಾ ಅಭಿಯಾನಕ್ಕೆ ಚಾಲನೆ
ಮಡಿಕೇರಿ : ಕೊಡಗು ಜಿಲ್ಲಾ ಲೀಡ್ ಬ್ಯಾಂಕ್ ಮಡಿಕೇರಿ, ಬ್ಯಾಂಕ್ ಆಫ್ ಬರೋಡ ಮರಗೋಡು ಶಾಖೆ ಇವರ ಸಹಯೋಗದೊಂದಿಗೆ ತಾಲ್ಲೂಕಿನ ಹೊಸ್ಕೇರಿ ಗ್ರಾಮದಲ್ಲಿ, ಹೊಸ್ಕೇರಿ ಗ್ರಾಮ ಪಂಚಾಯತಿಯ ಸಹಕಾರದೊಂದಿಗೆ, ಕೇಂದ್ರ ಸರಕಾರದ ಆದೇಶದಂತೆ ಆಯಾಯ ಗ್ರಾಮದ ಬ್ಯಾಂಕ್ ಶಾಖೆ ಮುಖಾಂತರ ಪ್ರತೀ ವರ್ಷವೂ ನಡೆಸುವ ಜನ ಸುರಕ್ಷಾ ಅಭಿಯಾನ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.
ಕೊಡಗು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಗಂಗಾಧರ್ ನಾಯಕ್ ಅವರು ಮಾತನಾಡಿ ಜನ ಸಾಮಾನ್ಯರು ಕಡ್ಡಾಯವಾಗಿ ಸಾಮಾಜಿಕ ಭದ್ರತಾ ಯೋಜನೆ ಮಾಡಿಸುವುದರ ಮೂಲಕ ಅದರ ಪ್ರಯೋಜನ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಮುಖ್ಯವಾಗಿ ಯೋಜನೆಗಳಲ್ಲಿ ಒಂದಾದ ಪ್ರಧಾನಮಂತ್ರಿ ಸುರಕ್ಷ ಭೀಮಾ ಯೋಜನೆಯು ಒಂದು ಅಪಘಾತ ವಿಮೆಯಾಗಿದ್ದು ವಾರ್ಷಿಕ 20 ರೂ. ಗಳನ್ನು ಪಾವತಿಸಿ ಈ ಯೋಜನೆ ಮಾಡಿಸಿಕೊಂಡಲ್ಲಿ ಯಾವುದೇ ರೀತಿಯ ಅಪಘಾತ ಸಂಭವಿಸಿದಲ್ಲಿ 2 ಲಕ್ಷ ರೂ. ಗಳ ವರೆಗಿನ ವಿಮಾ ಮೊತ್ತವು ಗ್ರಾಹಕರ ನಾಮಿನಿಗೆ ಸಿಗುವುದಾಗಿ ಮಾಹಿತಿ ನೀಡಿದರು.
ವಾರ್ಷಿಕವಾಗಿ 436 ರೂ.ಗಳನ್ನು ಪಾವತಿಸಿ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮೆಯನ್ನು ಮಾಡಿಸಿಕೊಂಡಲ್ಲಿ ಯಾವುದೇ ರೀತಿಯಲ್ಲಿ ಮರಣಹೊಂದಿದರೆ ಅಂತವರ ನಾಮಿನಿಗೂ ಕೂಡ 2 ಲಕ್ಷ ರೂ. ಗಳ ವಿಮಾಮೊತ್ತ ಸಿಗುವುದಾಗಿ ತಿಳಿಸಿದರು.
ಎರಡನ್ನೂ ಮಾಡಿಸಿಕೊಂಡಲ್ಲಿ 4 ಲಕ್ಷ ರೂ. ಗಳ ವರೆಗಿನ ವಿಮಾಮೊತ್ತ ಸಿಗುವುದಾಗಿ ಮಾಹಿತಿ ನೀಡಿದರು. ಅಲ್ಲದೆ 60 ವಯಸ್ಸು ಆದ ನಂತರದಲ್ಲಿ ಪಿಂಚಣಿ ರೂಪದಲ್ಲಿ 1000 ರೂ. ಗಳಿಂದ 5000 ರೂ. ಗಳ ವರೆಗಿನ ಪಿಂಚಣಿ ಹಣ ಸಿಗಬೇಕಾದರೆ ಈವಾಗಲೇ ಅಟಲ್ ಪಿಂಚಣಿ ಯೋಜನೆ ಮಾಡಿಸುವಂತೆ ತಿಳಿಸಿದರು.
ನಂತರದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಬೆಂಗಳೂರು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇವರ ಸಹಯೋಗದಲ್ಲಿ ನಬಾರ್ಡ್ನ ಆರ್ಥಿಕ ನೆರವಿನೊಂದಿಗೆ ಕೊಡಗು ಜಿಲ್ಲೆಯಲ್ಲಿ ಅವಾರ್ಡ್ ಎನ್ನುವ ಸಂಸ್ಥೆಯು ಆರ್ಥಿಕ ಸಾಕ್ಷರತಾ ಕಾರ್ಯಕ್ರಮವನ್ನು ಪ್ರತೀ ತಾಲ್ಲೂಕುಗಳಲ್ಲಿ ಮಾಡುತ್ತಿದ್ದು, ಇದರ ಮುಖ್ಯ ಉದ್ದೇಶವೂ ಕೂಡ ಸಾಮಾಜಿಕ ಭದ್ರತಾ ಯೋಜನೆಗಳನ್ನು ಮಾಡಿಸುವುದು, ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ನೀಡುವುದು ಮತ್ತು ಡಿಜಿಟಲ್ ಪೇಮೆಂಟ್ ಗಳ ಬಗ್ಗೆ ಮಾಹಿತಿ ನೀಡುವುದೇ ಆಗಿದೆ ಎಂದು ಅವಾರ್ಡ್ ಸಂಸ್ಥೆಯ ಜಿಲ್ಲಾ ಸಂಯೋಜಕರಾಗಿರುವ ಆಸೀಫ್ ಕೆ.ಎ. ಅವರು ತಿಳಿಸಿದರು.
ಹೊಸ್ಕೇರಿ ಗ್ರಾಮ ಪಂಚಾಯತಿ ಅಧ್ಯಕ್ಷರು ಮಾತನಾಡಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜನ ಸುರಕ್ಷಾ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.
ವೇದಿಕೆಯಲ್ಲಿ ಹೊಸ್ಕೇರಿ ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕೊಡಗು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಮತ್ತು ಬ್ಯಾಂಕ್ ಆಫ್ ಬರೋಡ ಮರಗೋಡು ಶಾಖೆಯ ವ್ಯವಸ್ಥಾಪಕರು ಉಪಸ್ಥಿತರಿದ್ದರು.








