ತಾಲ್ಲೂಕು ಮಟ್ಟದ ಹಾಕಿ ಪಂದ್ಯಾವಳಿ : ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ತಂಡಕ್ಕೆ ಜಯ
ಮಡಿಕೇರಿ : ಪ್ರಸಕ್ತ ಸಾಲಿನ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಹಾಕಿ ಪಂದ್ಯಾವಳಿಯು ಮಂಗಳವಾರ ನಗರದ ಭಾರತೀಯ ಕ್ರೀಡಾ ಪ್ರಾಧಿಕಾರದ ಸಾಯಿ ಹಾಕಿ ಮೈದಾನದಲ್ಲಿ ನಡೆಯಿತು.
ಭಾರತೀಯ ಕ್ರೀಡಾ ಪ್ರಾಧಿಕಾರದ(ಸಾಯಿ) ಸಹಾಯಕ ನಿರ್ದೇಶಕರಾದ ಮಿನಿ ಉಣ್ಣಿರಾಜ್ ಅವರು ಪಂದ್ಯಾವಳಿಯನ್ನು ಉದ್ಘಾಟಿಸಿದರು. ಪಂದ್ಯಾವಳಿಯ ಮುಖ್ಯ ಅತಿಥಿಗಳಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪಿ.ಆರ್.ವಿಜಯ, ದೈಹಿಕ ಶಿಕ್ಷಕರಾದ ರಾಕಿ ಪೂವಣ್ಣ, ಮಹಿಳಾ ಪ್ರಥಮ ದರ್ಜೆ ಕಾಲೇಜಿನ ನಿರ್ದೇಶಕರಾದ ಚಿದಾನಂದ ಎನ್.ಎಸ್., ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಗಿರಿಧರ ಗೌಡ, ಭಾಗಮಂಡಲ ದೈಹಿಕ ಶಿಕ್ಷಣ ಉಪನ್ಯಾಸಕರು, ಮೂರ್ನಾಡು ದೈಹಿಕ ಶಿಕ್ಷಣ ಉಪನ್ಯಾಸಕರಾದ ಬೋಪಣ್ಣ, ಇತರರು ಇದ್ದರು.
ಬಾಲಕಿಯರ ತಾಲ್ಲೂಕು ಮಟ್ಟದ ಹಾಕಿ ಪಂದ್ಯಾವಳಿಯು ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಸಂತ ಮೈಕಲರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರ ನಡುವೆ ನಡೆಯಿತು. ಇದರಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು 4-0 ಗೋಲ್‍ಗಳ ಅಂತರದಲ್ಲಿ ವಿಜೇತರಾದರು.
ಬಾಲಕರ ಪಂದ್ಯಾವಳಿಯು ಮೂರ್ನಾಡು ಪದವಿ ಪೂರ್ವ ಕಾಲೇಜು ಹಾಗೂ ಸಂತ ಮೈಕಲರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ನಡುವೆ ನಡೆಯಿತು. ಇದರಲ್ಲಿ ಸಂತ ಮೈಕಲರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು 3-0 ಗೋಲ್‍ಗಳ ಅಂತರದಲ್ಲಿ ವಿಜೇತರಾದರು.








