ಜನವಾಹಿನಿ News ಮಡಿಕೇರಿ : ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲರಿಗೂ ಉಚಿತ ಹಾಗೂ ಉತ್ತಮ ಗುಣಮಟ್ಟದ ಔಷಧಗಳನ್ನು ಒದಗಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಆರೋಗ್ಯ ಹಕ್ಕಿನ ಜಾಥಾ ನಡೆಸಿ ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬೇರು ಬೆವರು ಸಾಂಸ್ಕೃತಿಕ ಬಳಗದ ಸಂಚಾಲಕ ಸೋರಪಲ್ಲಿ ಚಂದ್ರಶೇಖರ್, ಕರ್ನಾಟಕದಲ್ಲಿ ಔಷಧಿಗಳು ಉಚಿತವಾಗಿ ಸಿಗುವಂತೆ ಮಾಡಲು ಸರ್ಕಾರವು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಲಿಮಿಟೆಡ್ ಅನ್ನು ೨೦೦೩ರಲ್ಲೇ ಸ್ಥಾಪಿಸಿದೆ. ಈ ಕಂಪೆನಿಯು ಇಡೀ ರಾಜ್ಯಕ್ಕೆ ಉಚಿತವಾಗಿ ಔಷಧಿ ಹಂಚಲೆಂದು ಔಷಧಿ ಖರೀದಿ ಮಡುತ್ತದೆ. ಆದ್ರೆ ಇದು ಪಾರದರ್ಶಕವಾಗಿಲ್ಲ. ಭ್ರಷ್ಟಾಚಾರದಿಂದ ಕೂಡಿದೆ. ಈ ಬಗ್ಗೆ ಆರೋಗ್ಯ ಸಚಿವರ ಗಮನಕ್ಕೆ ತಂದರೂ ಸ್ಪಂದನೆ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಆರೋಗ್ಯವು ಪ್ರತಿಯೊಬ್ಬರ ಹಕ್ಕಾಗಬೇಕೆ ಹೊರತು ಯೋಜನೆಯಾಗಬಾರದು ಎಂದರು.
ಎಲ್ಲಾ ಆಸ್ಪತ್ರೆಗಳಲ್ಲಿ ಪ್ರತಿಯೊಬ್ಬರಿಗೂ ಗುಣಮಟ್ಟದ ಔಷಧಿಗಳು ಉಚಿತವಾಗಿ ಲಭ್ಯವಾಗಬೇಕು. ಸರ್ಕಾರಿ ಆಸ್ಪತ್ರೆಯ ವೈದ್ಯರು ಹೊರಗಿನಿಂದ ಔಷಧಿ ಖರೀದಿಸಲು ಚೀಟಿ ಬರೆಯಬಾರದು. ರಾಜ್ಯದಲ್ಲಿ ಆರೋಗ್ಯ ಹಕ್ಕಿನ ಕಾಯ್ದೆಯನ್ನು ಜಾರಿಗೆ ತರಬೇಕು. ಸರ್ಕಾರಿ ಆಸ್ಪತ್ರೆಗಳನ್ನು ಖಾಸಗೀಕರಣ ಮಾಡುವ ಪಿಪಿಪಿ ಯೋಜನೆಯನ್ನು ಕೂಡಲೇ ಕೈಬಿಡಬೇಕು. ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿಯವರಿಗೆ ಹಸ್ತಾಂತರ ಮಾಡಬಾರದು. ಇದರ ಬದಲು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಗೊಳಿಸಬೇಕು. ಖಾಸಗಿ ವಲಯದಲ್ಲಿ ಆಸ್ಪತ್ರೆಗಳ ಶುಲ್ಕವನ್ನು ನಿಯಂತ್ರಿಸಬೇಕೆಂಬ ಹಕ್ಕೊತ್ತಾಯವನ್ನು ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬುಡಕಟ್ಟು ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ವೈ.ಬಿ.ಗಪ್ಪು, ಸದಸ್ಯರಾದ ಜೆ.ಆರ್.ಭವ್ಯ, ಕೊಟ್ಟ, ಪಿ.ಬಿ.ಗೀತಾ, ಗಂಗೆ ಮಾಯಮುಡಿ ಹಾಜರಿದ್ದರು.







