ಜನವಾಹಿನಿ NEWS ಸೋಮವಾರಪೇಟೆ : ಇನ್ನರ್‌ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹದ ಅಂಗವಾಗಿ ಹಾನಗಲ್ಲು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿಯರಿಗೆ ಸೀಮಂತ ಹಾಗು ಬಾಣಂತಿಯರಿಗೆ ಪೌಷ್ಠಿಕ ಆಹಾರದ ಮಹತ್ವದ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.
ಇನ್ನರ್‌ವೀಲ್ ಅಧ್ಯಕ್ಷೆ ತನ್ಮಯಿ ಪ್ರವೀಣ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅರೋಗ್ಯವಂತ ಮಗು ದೇಶದ ಸಂಪತ್ತು. ಗರ್ಭಿಣಿಯರು ಪೌಷ್ಠಿಕಾಂಶಯುಕ್ತ ಆಹಾರ ಸೇವಿಸಬೇಕು. ಒತ್ತಡ ಮುಕ್ತವಾಗಿ ಜೀವನ ಶೈಲಿ ಬೆಳೆಸಿಕೊಳ್ಳುವ ಮೂಲಕ ಅರೋಗ್ಯವಂತ ಮಗು ಜನನಕ್ಕೆ ತಮ್ಮ ಕೊಡುಗೆ ನೀಡಬೇಕು ಎಂದು ಹೇಳಿದರು. ಗರ್ಭಾವಸ್ಥೆಯಲ್ಲಿ ಮತ್ತು ಹಾಲುಣಿಸುವ ಸಮಯದಲ್ಲಿ ಆರೋಗ್ಯಕರ ಮತ್ತು ಪೌಷ್ಠಿಕ ಆಹಾರವನ್ನು ಬಳಸಬೇಕು. ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇರಿಸಿಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರು.
ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಠಿಕಾಂಶ ಲಡ್ಡು ಮತ್ತು ಪೌಷ್ಠಿಕ ರೊಟ್ಟಿಯಂತಹ ಕಡಿಮೆ ವೆಚ್ಚದ ಪಾಕವಿಧಾನಗಳನ್ನು ತಯಾರಿಸುವ ಬಗ್ಗೆ ಮಾಹಿತಿ ನೀಡಲಾಯಿತು. ಅಂಗನವಾಡಿ ಮಕ್ಕಳು, ಪೋಷಕರು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ಭಾಗವಹಿಸಿದ್ದರು. ಮಕ್ಕಳಿಗೆ ಬೆಚ್ಚನೆಯ ಉಡುಪು ಅಗತ್ಯ ಪರಿಕರಗಳನ್ನು ವಿತರಿಸಲಾಯಿತು.
ಇನ್ನರ್‌ವೀಲ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಸುವಿನಾ ಕೃಪಾಲ್, ಮಾಜಿ ಅಧ್ಯಕ್ಷೆ ಸಂಗೀತಾ ದಿನೇಶ್, ಪದಾಧಿಕಾರಿ ನಂದಿನಿ ಗೋಪಾಲ್ ಹಾಗೂ ಅಂಗನವಾಡಿ ಶಿಕ್ಷಕಿ ಶಾರದ ಪುರುಷೋತ್ತಮ್ ಇದ್ದರು.







