ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ನಡೆಯಲು ಫೂಟ್ ಥೆರಪಿ ಪೂರಕ : ಶಾಸಕ ಡಾ. ಮಂತರ್ ಗೌಡ
ಮಡಿಕೇರಿ : ನಮ್ಮ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ನಡೆಯಲು ಫೂಟ್ ಥೆರಪಿ ಚಿಕಿತ್ಸೆ ಹೆಚ್ಚು ಸಹಕಾರಿ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಹೇಳಿದ್ದಾರೆ.
ಕೊಡಗು ಪತ್ರಕರ್ತರ ಸಂಘದ ಸೋಮವಾರಪೇಟೆ ತಾಲ್ಲೂಕು ಘಟಕ, ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘ ಹಾಗೂ ಕಂಪಾನಿಯೋ ಅವರ ಸಹಯೋಗದಲ್ಲಿ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ಸಭಾಂಗಣದಲ್ಲಿ ಸಾರ್ವಜನಿಕರಿಗೆ ಆಯೋಜಿಸಲಾಗಿದ್ದ ಉಚಿತ ಫೂಟ್ ಪಲ್ಸ್ ಥೆರಪಿ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು .
ಜನರ ಜೀವನ ಶೈಲಿ ಬದಲಾಗುತ್ತಿರುವುದರಿಂದ ಆರೋಗ್ಯದ ಸಮಸ್ಯೆ ಹೆಚ್ಚಾಗುತ್ತಿದೆ. ಉತ್ತಮ ಆಹಾರ, ವ್ಯಾಯಾಮದಿಂದ ಹಿಂದೆ ಸರಿಯುತ್ತಿದ್ದು, ಸಿದ್ಧ ಆಹಾರಗಳನ್ನು ಬಳಸುವ ಮೂಲಕ ಆರೋಗ್ಯ ಹದಗೆಡುತ್ತಿದೆ. ದಿನಂಪ್ರತಿ ಸ್ವಲ್ಪ ಸಮಯವನ್ನಾದರೂ ವ್ಯಾಯಾಮಕ್ಕೆ ಅವಕಾಶ ಮಾಡಿಕೊಳ್ಳಬೇಕು. ವರ್ಷಕ್ಕೊವ್ಮ್ಮೆಯಾದರೂ, ಪೂರ್ಣ ಪ್ರಮಾಣದಲ್ಲಿ ನಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಳ್ಳುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು.
ಫೂಟ್ ಥೆರಪಿ ಮೂಲಕ ನಮ್ಮ ಪಾದದಿಂದ ಚಿಕಿತ್ಸೆ ನೀಡಲಾಗುವುದು. ವಾಹನ ಸವಾರರು ಶ್ರಮವಹಿಸಿ ಕೆಲಸ ಮಾಡುವ್ಯದುರಿಂದ ಈ ಥೆರಪಿಯಿಂದ ಹೆಚ್ಚಿನ ಅನುಕೂಲವಾಗುವುದು. ಸಾಧ್ಯವಾದಷ್ಟು ಜನರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಪತ್ರಕರ್ತರು ಹಾಗೂ ವಾಹನ ಚಾಲಕರು ಮತ್ತು ಮಾಲೀಕರ ಸಂಘದ ಸದಸ್ಯರಿಗೆ ಒಂದು ದಿನದ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ ಮಾಡಲಾಗುವುದು ಎಂದರು.
ಕಂಪಾನಿಯೋ ಸಂಸ್ಥೆಯ ವ್ಯವಸ್ಥಾಪಕ ಶಶಿಕಾಂತ್ ಪ್ರಜಾರಿ ಮಾತನಾಡಿ, ನಮ್ಮಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡಲು ಫೂಟ್ ಥೆರಪಿ ಬಹಳ ಉಪಯುಕ್ತವಾಗಿದೆ. ನಾವು ನೀಡುತ್ತಿರುವ ಅರ್ಧಗಂಟೆಯ ಫೂಟ್ ಥೆರಪಿ ೫ ಕಿಲೋ ಮೀಟರ್ ನಡಿಗೆಗೆ ಸಮನಾಗಿರುವುದು. ನಾವು ನಮ್ಮ ರಕ್ತಪರಿಚಲನೆಯನ್ನು ಸುಸ್ಥಿತಿಯಲ್ಲಿಡಲು ಕಲ್ಲು ಮತ್ತು ಮರಳಿನ ರಸ್ತೆಯಲ್ಲಿ ನಡೆಯಬೇಕು. ಇದರಿಂದ ನಮ್ಮ ಆರೋಗ್ಯ ಸುಧಾರಣೆಯೊಂದಿಗೆ, ಬಿಪಿ. ಸಕ್ಕರೆ ಕಾಯಿಲೆ, ನಿದ್ರಾಹೀನತೆ, ಪಾರ್ಶ್ವವಾಯು ಸೇರಿದಂತೆ ಹಲವು ಕಾಯಿಲೆಗಳನ್ನು ನಿಯಂತ್ರಣದಲ್ಲಿಡಬಹುದಾಗಿದೆ. ಇದರಿಂದ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಎಲ್ಲರಿಗೂ ೧೫ ದಿನಗಳ ಕಾಲು ಉಚಿತವಾಗಿ ಚಿಕತ್ಸೆ ನೀಡಲಾಗುತ್ತಿದ್ದು, ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಪತ್ರಕರ್ತರ ಸಂಘದ ಸೋಮವಾರಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಆರ್. ಹರೀಶ್ಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ವಾಹನ ಚಾಲಕರು ಮತ್ತು ಮೋಟಾರು ಮೋಟಾರು ಕೆಲಸಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಗೌರವಾಧ್ಯಕ್ಷ ಕೆ.ಜಿ. ಸುರೇಶ್ ಉಪಸ್ಥಿತರಿದ್ದರು.








