ಜನವಾಹಿನಿ NEWS ಮೂರ್ನಾಡು : ಇಲ್ಲಿನ ನಂ.೪೩೯ನೇ ಸಹಕಾರ ಸ್ಪೋರ್ಟ್ಸ್ ಕ್ಲಬ್ನ ವತಿಯಿಂದ ೧೦೧ನೇ ವಾರ್ಷಿಕ ಕೈಲ್ ಮುಹೂರ್ತ ಹಬ್ಬದ ಆಟೋಟಗಳ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಯಿತು.
ಮೂರ್ನಾಡು ವಿದ್ಯಾಸಂಸ್ಥೆಯ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಕ್ಲಬ್ನ ವತಿಯಿಂದ ಆಯೋಜಿಸಲಾಗಿದ್ದ ಆಟೋಟಗಳ ಕಾರ್ಯಕ್ರಮಗಳನ್ನು ತೆಂಗಿನಕಾಯಿಗೆ ಗುಂಡು ಹೊಡೆಯುವುದರ ಮೂಲಕ ಮೂರ್ನಾಡು ಪೊಲೀಸ್ ಉಪಠಾಣೆಯ ಪೊಲೀಸ್ ಅಧಿಕಾರಿ ಪಟ್ರಪಂಡ ಮೊಣ್ಣಪ್ಪ ಉದ್ಘಾಟಿಸಿ ಚಾಲನೆ ನೀಡಿದರು.
ನಂತರ ಸಮಾರಂಭವನ್ನುದ್ದೇಶಿಸಿ ಮಾತನಾಡಿ ಕೊಡಗಿನ ಯುವಜನತೆ ಎಲ್ಲರೂ ಕ್ರೀಡಾಪುಟುಗಳಾಗಬೇಕು. ಮೂರ್ನಾಡು ಪಕ್ಕದಲ್ಲಿಯೆ ಅಂತರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣವಾಗುತ್ತಿದ್ದು, ಕ್ರೀಡೆಯ ಬೆಳವಣಿಗೆಗೆ ಪೂರಕವಾಗಿದೆ. ಕೈಲ್ ಮುಹೂರ್ತ ಹಬ್ಬವನ್ನು ಬಹಳ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಹಬ್ಬದ ದಿನದಂದು ಎಲ್ಲಾರೂ ಒಟ್ಟಾಗಿ ಸೇರಿ, ಕ್ರೀಡಾ ಚಟುವಟಿಕೆಗಳಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು ಎಂದು ಹೇಳಿದರು.
ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮೂರ್ನಾಡಿನ ಪಶುವೈದ್ಯಾಧಿಕಾರಿ ಡಾ. ಶಿಲ್ಪ ಯಂಕನ ಮಾತನಾಡಿ ಒಂದು ಸಂಘವು ಶತಮಾನೋತ್ಸವ ಆಚರಿಸಿಕೊಂಡಿದೆ ಎಂದರೆ ಅಲ್ಲಿ ವ್ಯವಸ್ಥಿತವಾದ ಆಡಳಿತಾತ್ಮಕತೆ, ಸಂಘಟನೆ ಇದ್ದಾಗ ಮಾತ್ರ ಸಾಧ್ಯ ಎಂದು ಹೇಳಿದರು. ಇಂತಹ ಕ್ರೀಡೆಗಳಲ್ಲಿ ಪ್ರತಿಯೊಬ್ಬರು ಭಾಗವಹಿಸಬೇಕು. ಎಲ್ಲರೂ ಗೆಲ್ಲಲು ಸಾಧ್ಯವಿಲ್ಲ, ಭಾಗವಹಿಸುವಿಕೆ ಮನಸ್ಸಿಗೆ ಸಂತೋಷವನ್ನು ತಂದುಕೊಡುತ್ತದೆ. ಸೋಲು ಗೆಲವು ಆನಂತರದ ವಿಷಯವಾಗುತ್ತದೆ ಎಂದು ಹೇಳಿದರು.
ಮಹನೀಯರು, ಮಹಿಳೆಯರು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಓಟದ ಸ್ಪರ್ಧೆಗಳು, ಭಾರದ ಕಲ್ಲು ಎಸೆತ, ನಿಂಬೆಹಣ್ಣು ಚಮಚ ಓಟ, ವಯಸ್ಕರ ಓಟ, ಕಾಲುಕಟ್ಟಿ ಓಟ, ವಾದ್ಯದ ಕುಣಿತ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರು ಮುಖ್ಯ ಅತಿಥಿಗಳಿಂದ ಬಹುಮಾನ, ಪ್ರಶಸ್ತಿ ಪತ್ರಗಳನ್ನು ಪಡೆದುಕೊಂಡರು.
ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟ ಆರು ಗ್ರಾಮಗಳ ಮಹನೀಯರು ಮತ್ತು ಮಹಿಳೆಯರ ತಂಡಗಳ ಮಧ್ಯೆ ನಡೆದ ಹಗ್ಗ ಜಗ್ಗಾಟ ಪಂದ್ಯಾಟದಲ್ಲಿ ಮಹನೀಯರ ಬಾಡಗ ಗ್ರಾಮದ ತಂಡವು ಕಿಗ್ಗಾಲು ಗ್ರಾಮದ ತಂಡವನ್ನು ಸೋಲಿಸಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು. ಮಹಿಳೆಯರ ಹಗ್ಗ ಜಗ್ಗಾಟದಲ್ಲಿ ಕಿಗ್ಗಾಲು ಗ್ರಾಮದ ತಂಡವು ಬಾಡಗ ಗ್ರಾಮದ ತಂಡವನ್ನು ಸೋಲಿಸಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿತು. ಸಾರ್ವಜನಿಕರಿಗೆ ತೆಂಗಿನಕಾಯಿಗೆ ಗುಂಡುಹೊಡೆಯುವ ಸ್ಪರ್ಧೆಯಲ್ಲಿ ಮುಂದ ಡ ಬೋಪಣ್ಣ (ಪ್ರಥಮ), ಕುಚಿಲ್ಲಂಡ ದಿಲನ್ ದೇವಯ್ಯ (ದ್ವಿತೀಯ), ಬಡುವಂಡ ಮುತ್ತಪ್ಪ (ತೃತೀಯ) ಬಹುಮಾನಗಳನ್ನು ಪಡೆದುಕೊಂಡರು.
ಸಮಾರಂಭದ ಅಧ್ಯಕ್ಷತೆಯನ್ನು ಸಹಕಾರ ಸ್ಪೋರ್ಟ್ಸ್ ಕ್ಲಬ್ನ ಅಧ್ಯಕ್ಷ ಮುಂಡ ಪವಿ ಸೋಮಣ್ಣ ವಹಿಸಿದ್ದರು. ವೇದಿಕೆಯಲ್ಲಿ ಕ್ಲಬ್ನ ಗೌ|| ಕಾರ್ಯದರ್ಶಿ ಮೇರ್ಕಜೆ ಲೋಹಿತ್ ಸೋಮಯ್ಯ, ನಿರ್ದೇಶಕರುಗಳಾದ ಪುದಿಯೊಕ್ಕಡ ಪೊನ್ನು ಮುತ್ತಪ್ಪ, ಮೂಡೇರ ಮನು ಮಾದಪ್ಪ sಕೋಟೇರ ಮೇದಪ್ಪ, ಬೈಲೆ ತಿಮ್ಮಯ್ಯ, ಪುದಿಯೊಕ್ಕಡ ಕಾಶಿ ಕರುಂಬಯ್ಯ, ಪೆಮ್ಮಂಡ ಪವಿತ್ರ, ಕ್ಲಬ್ನ ಮಾಜಿ ಅಧ್ಯಕ್ಷರುಗಳಾದ ಚೇನಂಡ ಅಶೋಕ್, ಪಳಂಗಂಡ ಅಪ್ಪಣ್ಣ ಮತ್ತು ಪುದಿಯೊಕ್ಕಡ ಬೆಲ್ಲು ಸೋಮಯ್ಯ ಉಪಸ್ಥಿತರಿದ್ದರು. ಮೂಡೇರ ಹರೀಶ್ ಕಾಳಯ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
✒️ ಟಿ. ಸಿ. ನಾಗರಾಜ್, ಮೂರ್ನಾಡು







