ಜನವಾಹಿನಿ News ಸಿದ್ದಾಪುರ : ತುರ್ತು ಸಂದರ್ಭದಲ್ಲಿ ಅತ್ಯವಶ್ಯಕವಾಗಿರುವ ರಕ್ತದಾನಕ್ಕೆ ಬೆಲೆ ಕಟ್ಟಲಾಗದು ಮನುಷ್ಯನ ಪ್ರಾಣ ಉಳಿಸಲು ನೀಡುವ ರಕ್ತದಾನವೇ ಶ್ರೇಷ್ಠವಾಗಿದ್ದು, ಅಮೂಲ್ಯ ಜೀವಗಳನ್ನು ಉಳಿಸಲು ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಬೇಕೆಂದು ಜಿಲ್ಲಾ ಪಂಚಾಯತಿ ಸಾಮಾಜಿಕ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮೂಕೊಂಡ ವಿಜು ಸುಬ್ರಮಣಿ ಕರೆ ನೀಡಿದರು.
ಅಕ್ಷಯ ಚಾರಿಟೇಬಲ್ ಟ್ರಸ್ಟ್ ಮತ್ತು ಸಂಜೀವಿನಿ ಒಕ್ಕೂಟ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಸಹಕಾರದೊಂದಿಗೆ ಸಿದ್ದಾಪುರ ಗುಹ್ಯ ಅಗಸ್ಥೇಶ್ವರ ಸಹಕಾರ ಸಭಾಂಗಣದಲ್ಲಿ ನಡೆದ ರಕ್ತದಾನ ಶಿಬಿರ ಕಾರ್ಯಾಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ಕಡೆಗಳಲ್ಲೂ ಇಂತಹ ಶಿಬಿರಗಳನ್ನ ಆಯೋಜಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಕಾರ ನೀಡುವಂತೆ ಮನವಿ ಮಾಡಬೇಕಾಗಿದ್ದು, ಜೀವನದಲ್ಲಿ ನಾವು ಮಾಡುವ ದಾನ ರಕ್ತದಾನ ವಾಗಿರಬೇಕೆಂದು ಹೇಳಿದ ಅವರು ದೃಷ್ಟಿ ಕಳೆದುಕೊಂಡವರಿಗೆ ನೆರವಾಗಲು ಕಣ್ಣು ದಾನ ಹಾಗೂ ಅಂಗಾಂಗ ದಾನಕ್ಕೂ ಮುಂದಾಗಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಜೀವಿನಿ ಒಕ್ಕೂಟದ ಅಧ್ಯಕ್ಷ ತುಳಸಿ ಗಣಪತಿ, ಕಳೆದ ಹಲವಾರು ವರ್ಷಗಳಿಂದಲೂ ಒಕ್ಕೂಟ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರಲಾಗುತ್ತಿದ್ದು , ಮಹಿಳೆಯರನ್ನ ಒಗ್ಗೂಡಿಸಿ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವುದರ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರಲು ಶ್ರಮಿಸಿದೆ. ಸಂಘಟನೆಗಳ ಮೂಲಕ ಒಂದಾಗಿ ಅಭಿವೃದ್ಧಿಯೊಂದಿಗೆ ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೆಡ್ ಕ್ರಾಸ್ ಸಂಸ್ಥೆ, ಸಿದ್ದಾಪುರ ಪಂಚಾಯಿತಿ,ಹೆಚ್ ಡಿ ಎಫ್ ಸಿ ಬ್ಯಾಂಕ್,ಟಿಂಬರ್ ಮರ್ಚೆಂಟ್ಸ್ ಅಸೋಸಿಯೇಷನ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಹಾಜರಿದ್ದರು.
ಈ ಸಂದರ್ಭ ಸಂಜೀವಿನಿ ಒಕ್ಕೂಟ ಸಂಪನ್ಮೂಲ ವ್ಯಕ್ತಿ ಯಮುನ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಆಶಾ, ರೆಡ್ ಕ್ರಾಸ್ ಸಂಸ್ಥೆಯ ಬಿ ಎನ್ ಪ್ರಕಾಶ್, ಕಾರ್ಮಿಕ ಮುಖಂಡ ರಮೇಶ್, ಸೇರಿದಂತೆ ರಕ್ತನಿಧಿ ಘಟಕದ ವೈದ್ಯರು ಸ್ಥಳೀಯ ವೈದಾಧಿಕಾರಿಗಳು ಮತ್ತಿತರರು ಹಾಜರಿದ್ದರು .







