Breaking News :

ಇತಿಹಾಸ ಪ್ರಸಿದ್ಧ ಕರಡಿಗೋಡು ಬಸವೇಶ್ವರ ದೇವರ ಉತ್ಸವದಲ್ಲಿ ಶಾಸಕ ಪೊನ್ನಣ್ಣ ಭಾಗಿ : ವಿಶೇಷ ಪ್ರಾರ್ಥನೆ 

 


ಜನವಾಹಿನಿ News ಮಡಿಕೇರಿ : ಹಲವಾರು ವರ್ಷಗಳ ಇತಿಹಾಸ ಹೊಂದಿರುವ ಕರಡಿಗೊಡು ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ವಾರ್ಷಿಕೋತ್ಸವವು ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ಭಾನುವಾರ ಪ್ರಾರಂಭವಾಯಿತು. ಮೂರು ದಿನಗಳ ಕಾಲ ನಡೆಯುವ ಉತ್ಸವದ ಎರಡನೇ ದಿನವಾದ ಸೋಮವಾರವೂ ಬಸವೇಶ್ವರನಿಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿತು.

ಉತ್ಸವಕ್ಕೆ ಆಗಮಿಸಿದ ವಿರಾಜಪೇಟೆ ಕ್ಷೇತ್ರ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗರರಾದ ಎ.ಎಸ್ ಪೊನ್ನಣ್ಣ ಮಹಾಪೂಜೆಯಲ್ಲಿ ಪಾಲ್ಗೊಂಡು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಶಾಸಕನಾಗಿ ಆಯ್ಕೆಯಾದ ಬಳಿಕ ನಾನು ಸತತ ಮೂರನೇ ಬಾರಿ ಕರಡಿಗೋಡು ಇತಿಹಾಸ ಪ್ರಸಿದ್ಧ ಬಸವೇಶ್ವರ ದೇವರ ವಾರ್ಷಿಕೋತ್ಸವದಲ್ಲಿ ಭಾಗಿಯಾಗುತ್ತಿದ್ದು, ನಾಡಿನ ಸಮಸ್ತ ಜನರ ಕಲ್ಯಾಣ, ಶಾಂತಿ, ಮತ್ತು ಸಮೃದ್ಧಿಗಾಗಿ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು ಎಂದರು.

ಬೆಳಗ್ಗೆ 8-30 ಕ್ಕೆ ಗಣಪತಿ ಹೋಮದೊಂದಿಗೆ ಪೂಜಾ ಕೈಂಕರ್ಯಗಳು ಪ್ರಾರಂಭವಾಗಿ 10:00 ಕ್ಕೆ ಕಲಶ ಪೂಜೆ,11:00ಕ್ಕೆ ಗಂಗಾ ಸ್ನಾನ ,ಕಾವೇರಿ ನದಿಯಿಂದ ಶ್ರೀ ಬಸವೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಮಧ್ಯಾಹ್ನ 12:30 ಕ್ಕೆ ಮಹಾಪೂಜೆ ಬಳಿಕ ತೀರ್ಥ ಪ್ರಸಾದ, ಅನ್ನ ಸಂತರ್ಪಣೆ ಜರುಗಿತು. ನಂತರ 3:30ಕ್ಕೆ ಮನೆ ಮನೆಗೆ ದೇವರ ಮೆರವಣಿಗೆ, ಸಂಜೆ ಕೊಂಡ ಪೂಜೆ ನೆರವೇರಿತು.

ಬೆಳಗ್ಗಿನಿಂದಲೇ ಸುತ್ತಮುತ್ತಲ ಗ್ರಾಮದ ಸಾವಿರಾರು ಮಂದಿ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಬಸವೇಶ್ವರ ದೇವರ ದರ್ಶನ ಪಡೆದುಕೊಂಡರು .ಉತ್ಸವದ ಪ್ರಮುಖ ಆಕರ್ಷಣೆಯಾದ ಪಲ್ಲಕ್ಕಿಯಲ್ಲಿದ್ದ ಉತ್ಸವ ಮೂರ್ತಿ ಭಕ್ತರ ಬಳಿಗೆ ತೆರಳಿ ದರ್ಶನ ನೀಡಿದ್ದು ವಿಶೇಷವಾಗಿತ್ತು.

ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ, ಪ್ರಸನ್ನ, ಕಾರ್ಯದರ್ಶಿ ಕೆ ಎ ಚಿದಾನಂದ, ತಕ್ಕ ಮುಖ್ಯಸ್ಥರಾದ ದೇವಪ್ರಕಾಶ್.ಕೆ. ಬಿ, ದೇವಾಲಯ ಸಮಿತಿ ಸದಸ್ಯರಾದ ಮಿಲನ್ ಕೆ.ಸಿ ಸೇರಿದಂತೆ ಪದಾಧಿಕಾರಿಗಳು, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಸಿದ್ದಾಪುರ ವಲಯ ಕಾಂಗ್ರೆಸ್ ಪ್ರಮುಖರಾದ ಪ್ರತೀಶ್, ಗೋಣಿಕೊಪ್ಪ ಪಂಚಾಯಿತಿ ಅಧ್ಯಕ್ಷ ಕುಲಚಂಡ ಪ್ರಮೋದ್ ಗಣಪತಿ, ಪಕ್ಷದ ಜಾಲತಾಣ ಪ್ರಮುಖ ಸೂರಜ್ ಹೊಸೂರು, ಕುಂಡಚ್ಚಿರ ಮಂಜು ದೇವಯ್ಯ, ಮಲ್ದಾರೆ ಪಂಚಾಯಿತಿ ಅಧ್ಯಕ್ಷೆ ಮಾಲತಿ, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.


ಜಾತ್ರೋತ್ಸವದ ಕೊನೆಯ ದಿನವಾದ ಮಂಗಳವಾರ ಬೆಳಗ್ಗೆ 8:00ಗಂಟೆಗೆ ರುದ್ರಪಾರಾಯಣ, 10 ಗಂಟೆಗೆ ದೇವತಾ ಪ್ರಾರ್ಥನೆ, ಗಂಗಾ ಪೂಜೆ, ಗಂಗಾ ಸ್ನಾನ, ನಂತರ ಶ್ರೀ ಬಸವೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ, ಕೊಂಡ ಸೇವೆ, ಮಹಾಪೂಜೆ, ಹರಕ್ಕೆ ಒಪ್ಪಿಸುವುದು, ತೀರ್ಥ ಪ್ರಸಾದ, ಅನ್ನ ಸಂತರ್ಪಣೆ, ಮಂತ್ರಾಕ್ಷತೆ ನಡೆಯಲಿದೆ.

Share this article

ಟಾಪ್ ನ್ಯೂಸ್

More News