Breaking News :

ಕೊಡಗು ಪ್ರೆಸ್ ಕ್ಲಬ್ ಕ್ರಿಕೆಟ್ ಪ್ರೀಮಿಯರ್ ಲೀಗ್ – ಮೀಡಿಯಾ ಚಾಲೆಂಜರ್ಸ್ ಚಾಂಪಿಯನ್ಸ್ 

 


ಜನವಾಹಿನಿ News ಮಡಿಕೇರಿ : ಕೊಡಗು ಪ್ರೆಸ್ ಕ್ಲಬ್ ವತಿಯಿಂದ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಭಾನುವಾರ ಪತ್ರಕರ್ತರಿಗೆ ಆಯೋಜಿಸಿದ್ದ ಕೊಡಗು ಪ್ರೆಸ್ ಕ್ಲಬ್ ಕ್ರಿಕೆಟ್ ಪ್ರೀಮಿಯರ್ ಲೀಗ್-೪ ನಲ್ಲಿ ಮೀಡಿಯಾ ಚಾಲೆಂಜರ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.

ಫೈನಲ್ ಪಂದ್ಯಾಟದಲ್ಲಿ ಟಾಸ್ ಸೋತ ಮೀಡಿಯಾ ಚಾಲೆಂಜರ್ಸ್ ತಂಡ ನಿಗದಿತ ೬ ಓವರ್‌ನಲ್ಲಿ ೨ ವಿಕೆಟ್ ನಷ್ಟಕ್ಕೆ ೮೧ ರನ್ ಕಲೆಹಾಕಿತು. ತಂಡದ ಪರ ವಿನೋದ್ ೩೯, ಹೇಮಂತ್ ೩೧ ರನ್ ಕಲೆ ಹಾಕಿದರು. ಗುರಿ ಬೆನ್ನಟ್ಟಿದ ಮೀಡಿಯಾ ಹಿಟ್ರ‍್ಸ್ ತಂಡ ೪ ವಿಕೆಟ್ ಕಳೆದುಕೊಂಡು ೫೪ ರನ್‌ಗಳಿಸಿ ೨೭ರನ್‌ಗಳ ಅಂತರದಲ್ಲಿ ಸೋಲುಂಡಿತ್ತು.

ಇದಕ್ಕೂ ಮೊದಲು ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮೀಡಿಯಾ ಚಾಲೆಂಜರ್ಸ್ ತಂಡವನ್ನು ಮೀಡಿಯಾ ಹಿಟ್ರ‍್ಸ್ ತಂಡ ೧೦ ವಿಕೆಟ್‌ಗಳಿಂದ ಮಣಿಸಿತು. ನಂತರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಟಾಸ್ ಸೋತ ಕೂರ್ಗ್ ಡ್ಯೂ ಡ್ರಾಪ್ಸ್ ಕುಶಾಲನಗರ ತಂಡ ನಿಗದಿತ ಓವರ್‌ನಲ್ಲಿ ೭ ವಿಕೆಟ್ ನಷ್ಟಕ್ಕೆ ೪೪ ರನ್ ಕಲೆಹಾಕಿತು. ಗುರಿಬೆನ್ನಟ್ಟಿದ ಮೀಡಿಯಾ ಸೂಪರ್ ಕಿಂಗ್ಸ್ ತಂಡ ೫.೨ ಓವರ್‌ನಲ್ಲಿ ೪ ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.

೨ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಸೋತ ಮೀಡಿಯಾ ಚಾಲೆಂಜರ್ಸ್ ತಂಡ ನಿಗದಿತ ಓವರ್‌ನಲ್ಲಿ ೧ ವಿಕೆಟ್ ನಷ್ಟಕ್ಕೆ ೧೦೦ ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ತಂಡದ ಪರ ಹೇಮಂತ್ ೨೧ ಎಸೆತಗಳಲ್ಲಿ ೧೦ ಸಿಕ್ಸರ್, ೧ ಬೌಂಡರಿ ನೆರವಿನೊಂದಿಗೆ ೬೭ ರನ್ ಬಾರಿಸಿದರು. ಗುರಿ ಬೆನ್ನಟ್ಟಿದ ಮೀಡಿಯಾ ಸೂಪರ್ ಕಿಂಗ್ಸ್ ತಂಡ ೧ ವಿಕೆಟ್ ಕಳೆದುಕೊಂಡು ೮೪ ರನ್ ದಾಖಲಿಸಿ ೧೬ ರನ್‌ಗಳ ಅಂತರದಲ್ಲಿ ಸೋಲುಂಡಿತ್ತು. ತಂಡದ ಪರ ಇಸ್ಮಾಯಿಲ್ ಕಂಡಕೆರೆ ೨೦ ಎಸೆತದಲ್ಲಿ ೫೧ ರನ್ ಹಾಗೂ ಲೋಹಿತ್ ೨೭ರನ್ ಕಲೆಹಾಕಿದರು. ಇದಕ್ಕೂ ಮೊದಲು ಲೀಗ್ ಹಂತದಲ್ಲಿ ೬ ತಂಡಗಳು ಅಂಕಪಟ್ಟಿಗಾಗಿ ಸೆಣಸಾಟ ನಡೆಸಿತು.

ವೈಯಕ್ತಿಕ ಪ್ರಶಸ್ತಿ ವಿವರ: ಸರಣಿ ಶ್ರೇಷ್ಠ ಪ್ರಶಸ್ತಿ, ಬೆಸ್ಟ್ ಬ್ಯಾಟ್ಸ್ಮನ್, ಅತಿಹೆಚ್ಚು ಸಿಕ್ಸರ್ ಪ್ರಶಸ್ತಿಯನ್ನು ಮೀಡಿಯಾ ಚಾಲೆಂಜರ್ಸ್ ತಂಡದ ಹೇಮಂತ್ ಪಡೆದುಕೊಂಡರು. ಫೈನಲ್ ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಮೀಡಿಯಾ ಚಾಲೆಂಜರ್ಸ್ ತಂಡದ ಪಾರ್ಥ ಚಿಣ್ಣಪ್ಪ, ಬೆಸ್ಟ್ ಕ್ಯಾಚ್ ಪ್ರಶಸ್ತಿಯನ್ನು ಮೀಡಿಯಾ ಸೂಪರ್ ಕಿಂಗ್ಸ್ ತಂಡ ಕಿಶೋರ್ ಶೆಟ್ಟಿ, ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಮೀಡಿಯಾ ಹಿಟ್ರ‍್ಸ್ ತಂಡದ ಅಂಥೋಣಿ, ಬೆಸ್ಟ್ ಆಲ್ ರೈಂಡರ್ ಪ್ರಶಸ್ತಿಯನ್ನು ಮೀಡಿಯಾ ಸೂಪರ್ ಕಿಂಗ್ಸ್ ತಂಡದ ಮುಸ್ತಫಾ, ಬೆಸ್ಟ್ ಫೀಲ್ಡರ್ ಪ್ರಶಸ್ತಿಯನ್ನು ಮೀಡಿಯಾ ಚಾಲೆಂಜರ್ಸ್ ತಂಡದ ಟಿ.ಎನ್.ಮಂಜುನಾಥ್, ಬೆಸ್ಟ್ ವಿಕೇಟ್ ಕೀಪರ್ ಪ್ರಶಸ್ತಿಯನ್ನು ಮೀಡಿಯಾ ಹಿಟ್ರ‍್ಸ್ ತಂಡದ ಕೆ.ಎಂ.ವಿನೋದ್, ಬೆಸ್ಟ್ ವುಮೆನ್ ಪ್ಲೇಯರ್ ಮೀಡಿಯಾ ಸೂಪರ್ ಕಿಂಗ್ಸ್ ತಂಡದ ಜಯಂತಿ ಪಡೆದುಕೊಂಡರು. ತೀರ್ಪುಗಾರರಾಗಿ ರಮೇಶ್, ಮಂಜುನಾಥ್, ಸಚಿನ್ ಕಾರ್ಯನಿರ್ವಹಿಸಿದರೆ, ರಂಜು, ಶಂಶಾಕ್ ಸ್ಕೋರರ್ ಆಗಿ ಕಾರ್ಯನಿರ್ವಹಿಸಿದರು.

ಬಹುಮಾನ ವಿವರ


ಪ್ರಥಮ ಸ್ಥಾನ ಪಡೆದ ಮೀಡಿಯಾ ಚಾಲೆಂಜರ್ಸ್ ತಂಡಕ್ಕೆ ೮೧,೦೦೦ ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ಮೀಡಿಯಾ ಹಿಟ್ರ‍್ಸ್ ತಂಡಕ್ಕೆ ೪೧,೦೦೦ ನಗದು ಮತ್ತು ಆಕರ್ಷಕ ಟ್ರೋಫಿ, ತೃತೀಯ ಮತ್ತು ಚರ್ತುಥ ಸ್ಥಾನ ಪಡೆದ ಕೂರ್ಗ್ ಡ್ಯೂ ಡ್ರಾಪ್ಸ್ ಕುಶಾಲನಗರ ಹಾಗೂ ಮೀಡಿಯಾ ಸೂಪರ್ ಕಿಂಗ್ಸ್ ತಂಡಗಳಿಗೆ ತಲಾ ೧೦,೦೦೦ ನಗದು ಮತ್ತು ಆಕರ್ಷಕ ಟ್ರೋಫಿಯನ್ನು ಸಮಾರೋಪ ಸಮಾರಂಭದಲ್ಲಿ ನೀಡಿ ಗೌರವಿಸಲಾಯಿತು.

ನಗರ ವೃತ್ತನಿರೀಕ್ಷಕ ಪಿ.ಕೆ.ರಾಜುಗೆ ಸನ್ಮಾನ

ಫೈನಲ್ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಮಡಿಕೇರಿ ನಗರ ವೃತ್ತನಿರೀಕ್ಷಕ ಪಿ.ಕೆ.ರಾಜು ಅವರನ್ನು ಕೊಡಗು ಪ್ರೆಸ್‌ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭ ಮಾತನಾಡಿದ ರಾಜು ಅವರು, ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗದೊಂದಿಗೆ ಪತ್ರಿಕಾಂಗವೂ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದೆ. ಸಮಾಜವನ್ನು ಜಾಗೃತಗೊಳಿಸುವಲ್ಲಿ ಪತ್ರಕರ್ತರು ಪ್ರಮುಖ ಪಾತ್ರ ವಹಿಸುತ್ತಾರೆ. ಸಾರ್ವಜನಿಕರಿಗೆ ಪತ್ರಿಕಾ ರಂಗದ ಮೇಲೆ ಅಪಾರ ನಂಬಿಕೆ ಇದೆ. ಉತ್ತಮ ಸಮಾಜಕ್ಕೆ ನಾವೆಲ್ಲ ಕೈಜೋಡಿಸಬೇಕು. ದೇಶದ ಭವಿಷ್ಯ ದೃಷ್ಟಿಯಲ್ಲಿ ಕೆಲಸ ಮಾಡಬೇಕು. ಸಮಾಜದ ಸೌಹಾರ್ದತೆ ಕಾಪಾಡುವಲ್ಲಿಯೂ ಪತ್ರಕರ್ತರ ಪತ್ರ ದೊಡ್ಡ ಮಟ್ಟದಲ್ಲಿದೆ ಎಂದ ಅವರು, ನಿತ್ಯ ಒತ್ತಡದಲ್ಲಿರುವ ಪತ್ರಕರ್ತರಿಗೆ ಈ ರೀತಿಯ ಕ್ರೀಡಾಕೂಟ ಮನೋಲ್ಲಾಸ ನೀಡುವಲ್ಲಿ ಸಹಕಾರಿಯಾಗಿದೆ ಎಂದರು.

ಪತ್ರಕರ್ತರಿಗೂ ಮನೋರಂಜನೆ ಅಗತ್ಯ

ದಿನನಿತ್ಯ ವೃತ್ತಿಯ ಜಂಜಾಟದಲ್ಲಿರುವ ಪತ್ರಕರ್ತರಿಗೂ ಮನೋರಂಜನೆ ಅಗತ್ಯ ಎಂದು ಸಮಾಜ ಸೇವಕರಾದ ಕೆ.ಎಂ.ಬಿ.ಗಣೇಶ್ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಕೊಡಗು ಪ್ರೆಸ್ ಕ್ಲಬ್ ಕ್ರಿಕೆಟ್ ಪ್ರೀಮಿಯರ್ ಲೀಗ್-೪ನ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಕ್ರೀಡೆಯೂ ದೇಹಕ್ಕೆ ಉತ್ತಮವಾದದ್ದು. ಸದಾ ವೃತ್ತಿಯ ಜಂಜಾಟದಲ್ಲಿರುವ ಪತ್ರಕರ್ತರಿಗೆ ಸಮಯ ಸಿಗುವುದಿಲ್ಲ. ಸಮಾಜಕೆ ಉತ್ತಮ ಸೇವೆ ಕಲ್ಪಿಸುವ ಪತ್ರಕರ್ತರಿಗೂ ಮನೋರಂಜನೆ ಅಗತ್ಯವಾಗಿದೆ ಎಂದ ಅವರು, ಸೋಲು ಗೆಲುವು ಮನುಷ್ಯನ ಒಂದು ಬಣವಾಗಿದ್ದು, ಸೋತವರು ಮುಂದೆ ಬರುವ ಪ್ರಯತ್ನ ಮಾಡಬೇಕು ಎಂದರು.

ಸಮಾಜ ಸೇವಕರು ಮತ್ತು ಉದ್ಯಮಿ, ನಗರಸಭೆ ಮಾಜಿ ಅಧ್ಯಕ್ಷರಾದ ಎಚ್.ಎನ್.ನಂದಕುಮಾರ್ ಮಾತನಾಡಿ, ಸದಾ ವೃತ್ತಿಯಲ್ಲಿ ಮುಳುಗಿರುವ ಪತ್ರಕರ್ತರಿಗೆ ಬದಲಾವಣೆ ಅಗತ್ಯವಾಗಿದೆ. ಬದಲಾವಣೆ ಮನುಷ್ಯನ ಸಹಜ ಗುಣ ಕೂಡ ಆಗಿದೆ ಎಂದ ಅವರು, ಇಂದು ಎಲ್ಲಾ ಸಂಘ ಸಂಸ್ಥೆಗಳು, ಸಮುದಾಯ ಬಾಂಧವರು ಕ್ರೀಡಾಕೂಟ ಆಯೋಜನೆ ಮಾಡುತ್ತಿದ್ದಾರೆ. ಕೊಡಗು ಕ್ರೀಡಾ ಜೊತೆಯಾಗಿ ಬೆಳೆದಿದ್ದು, ತಮ್ಮ ಸಹಕಾರ ಎಂದಿಗೂ ಇರಲಿದೆ ಎಂದು ಹೇಳಿದರು.

ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ.ಬಿ.ಅಯ್ಯಪ್ಪ ಮಾತನಾಡಿ, ಕ್ರೀಡೆಯಲ್ಲಿ ಸೋಲುಗೆಲುವು ಸಾಮಾನ್ಯ. ಆದರೆ, ಪಂದ್ಯಾಟ ಆರಂಭಕ್ಕೂ ಮುಂಚಿತವಾಗಿಯೇ ಈ ತಂಡಗಳು ಗೆಲ್ಲಲಿದೆ ಎಂದು ನಿರೀಕ್ಷೆ ಮಾಡುವುದು ತಪ್ಪು. ಚುಟುಕು ಕ್ರಿಕೆಟ್‌ನಲ್ಲಿ ಫಲಿತಾಂಶ ಎಂದಿಗೂ ಮೊದಲೇ ನಿರೀಕ್ಷೆ ಮಾಡಬಾರದು ಎಂದು ಕಿವಿಮಾತು ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕಿ ಬಿ.ಆರ್.ಸವಿತಾ ರೈ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕ್ರೀಡಾ ಸಂಚಾಲಕ ಸಂತೋಷ್ ರೈ, ಕೊಡಗು ಪ್ರೆಸ್ ಕ್ಲಬ್ ಉಪಾಧ್ಯಕ್ಷ ಮಂಜು ಸುವರ್ಣ, ಪ್ರಧಾನ ಕಾರ್ಯದರ್ಶಿ ಆದರ್ಶ್ ಅದ್ಕಲೇಗಾರ್, ತೀರ್ಪುಗಾರರಾದ ರಮೇಶ್, ಮಂಜುನಾಥ್, ಸಚಿನ್ ಇದ್ದರು. ಕೊಡಗು ಪ್ರೆಸ್ ಕ್ಲಬ್ ಸದಸ್ಯ ಚೆನ್ನನಾಯಕ್ ಪ್ರಾರ್ಥಿಸಿದರೆ, ಹಿರಿಯ ಉಪಾಧ್ಯಕ್ಷ ನವಿನ್ ಡಿಸೋಜ ಸ್ವಾಗತಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಜೆ.ರಾಕೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Share this article

ಟಾಪ್ ನ್ಯೂಸ್

More News