ಜನವಾಹಿನಿ News ಮಡಿಕೇರಿ : ಇತ್ತೀಚೆಗೆ ನಾಪೋಕ್ಲಿನಲ್ಲಿ ಹಿಂದೂ ಸಂಗಮ ಪ್ರಚಾರದ ವೇಳೆ ನಡೆದ ಹಲ್ಲೆ ಪ್ರಕರಣದ ಆರೋಪಿತರಿಗೆ ಷರತ್ತುಬದ್ಧವಾಗಿ ನೀಡಲಾಗಿರುವ ಜಾಮೀನನ್ನು ರದ್ದುಪಡಿಸಿ ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಒತ್ತಾಯಿಸಿದರು.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಪೋಕ್ಲುವಿನಲ್ಲಿ ಈಚೆಗೆ ಶಾಂತಿ ಕದಡುವ ಉದ್ದೇಶದಿಂದ ಹಿಂದೂ ಸಮಾಜೋತ್ಸವದ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲಾಗಿತ್ತು. ನಂತರ ಷರತ್ತುಬದ್ಧ ಜಾಮೀನಿನ ಮೇಲೆ ಹೊರಬಂದಿರುವ ಅವರು ಮತ್ತೆ ಇನ್ ಸ್ಟಾಗ್ರಾಂ ಖಾತೆಯಲ್ಲಿ ಶಾಂತಿ ಕದಡುವ ಪೋಸ್ಟ್ ಮಾಡಿದ್ದಾರೆ. ಇಂತಹ ಸಮಾಜಘಾತುಕ ಶಕ್ತಿಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಅಥವಾ ಜಾಮೀನು ನಿರಾಕರಿಸಿ ಮತ್ತೆ ಜೈಲಿಗೆ ಅಟ್ಟುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ನಾಪೋಕ್ಲು ಸರ್ಕಾರಿ ಕಾಲೇಜಿಗೆ ಸಂಬಂಧಪಟ್ಟ ಜಾಗದಲ್ಲಿ ಅನಧಿಕೃತವಾಗಿ ಅತಿಕ್ರಮಿಸಿ ಶಾದಿಮಾಹಲ್ ನಿರ್ಮಾಣಕ್ಕೆ ಮುಂದಾದ ಸಂದರ್ಭ ಭಾರತೀಯ ಜನತಾ ಪಾರ್ಟಿ ಪ್ರತಿಭಟಿಸಿತ್ತು. ಈ ಸಂದರ್ಭ ತಾತ್ಕಾಲಿಕವಾಗಿ ಕಾಮಗಾರಿಯನ್ನು ತಡೆಮಾಡಿ ಸರ್ವೆ ಕಾರ್ಯಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಆದರೆ, ಅತಿಕ್ರಮಣದ ತೆರವು ಕಾರ್ಯ ಇಲ್ಲಿಯವರೆಗೆ ಆಗಿಲ್ಲ. ಈ ಎಲ್ಲಾ ಕೃತ್ಯಗಳು ಯಾರ ಕುಮ್ಮಕು ಮತ್ತು ಬೆಂಬಲದಿಂದ ನಡೆಯುತ್ತಿದೆ ಎಂಬುವುದನ್ನು ಜಿಲ್ಲೆಯ ಜನತೆ ಅರಿತುಕೊಳ್ಳಬೇಕಾಗಿದೆ ಎಂದರು.
ಜನರಿಗೆ ಸಮಸ್ಯೆ ಆದಾಗ ಪ್ರತಿಭಟನೆ ಮಾಡುವುದು ವಿರೋಧ ಪಕ್ಷದ ಕರ್ತವ್ಯ ಎಂದ ಅವರು, ಎಷ್ಟೇ ಜನರ ಆನೆ ದಾಳಿಗೆ ಸತ್ತರೂ ಕಣ್ಣು ಮುಚ್ಚಿ ಕುಳಿತುಕೊಳ್ಳಬೇಕೆ? ಸರ್ಕಾರದ ಗಮನ ಸೆಳೆಯಲೇಬಾರದೆ? ಎಂದು ಪ್ರಶ್ನಿಸಿದ ಅವರು, ನಾವು ಪ್ರತಿಭಟನೆ ಮಾಡಿದ್ದರಿಂದ ಅರಣ್ಯ ಸಚಿವರು ಎಚ್ಚೆತ್ತುಕೊಂಡು ಸಭೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇಲ್ಲಿನ ಮುಖಂಡರನ್ನು ಒಳಗೊಂಡಂತೆ ಸಭೆ ನಡೆಸಬೇಕು ಎಂದು ಆಗ್ರಹಿಸಿದರು.
ಕೇರಳ ಸರ್ಕಾರಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಅನುದಾನ ನೀಡುತ್ತಿದೆ ಎಂಬ ಕಾಂಗ್ರೆಸಿಗರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕೇರಳದಲ್ಲಿ ಬಿಜೆಪಿ ಸರ್ಕಾರ ಇಲ್ಲ. ಅಲ್ಲಿನ ಸರ್ಕಾರ ಕೇಂದ್ರದ ಗಮನ ಸೆಳೆದು ಅನುದಾನ ತೆಗೆದುಕೊಂಡಿದ್ದಾರೆ. ಇಲ್ಲಿನ ಸರ್ಕಾರಕ್ಕೆ ಆ ಸಾಮರ್ಥ್ಯ ಇಲ್ಲ. ಇಲ್ಲಿನ ಸರ್ಕಾರವೂ ಸಂಸದರೊಂದಿಗೆ ತೆರಳಿ ಕೇಂದ್ರದಿಂದ ಅನುದಾನ ತರಲು ಪ್ರಯತ್ನ ಮಾಡಿಲ್ಲ. ಪರಿಣಾಮ ಅನುದಾನ ಬರುತ್ತಿಲ್ಲ ಎಂದ ಅವರು, ಜಿಲ್ಲೆಯಲ್ಲಿ ಹಿಂದೆ ಅನೇಕ ಕೆಲಸ ಮಾಡಿದಾಗ ನಮ್ಮ ಬಿಜೆಪಿ ಶಾಸಕರು ಫೋಟೊ ಹಾಕಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಬಿಜೆಪಿ ಸರ್ಕಾರವಿದ್ದ ಸಂದರ್ಭ ನಿರ್ಮಾಣ ಮಾಡಿದ ಕಟ್ಟಡ ಕಾಮಗಾರಿಗಳಿಗೆ ಇಂದು ಕಾಂಗ್ರೆಸಿಗರು ಬಣ್ಣಬಳಿದು ಉದ್ಘಾಟನೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಮಾಜಿ ಸಚಿವ ಮತ್ತು ಮಾಜಿ ಶಾಸಕ ಅಪ್ಪಚ್ಚುರಂಜನ್ ಮಾತನಾಡಿ, ಅನಿಲ ಉತ್ಪಾದನೆ ನಮ್ಮ ದೇಶದಲ್ಲಿ ಇಲ್ಲ. ಗಲ್ಫ್ ಕಂಟ್ರಿಯಲ್ಲಿ ಇಂದು ವಾರ್ ನಡೆಯುತ್ತಿದ್ದರೂ ಕೂಡ ಚೈನಾಗೆ ಹೋಗುವ ಟ್ಯಾಂಕರ್ ನಮ್ಮಲ್ಲಿಗೆ ತರಿಸುವ ಪ್ರಯತ್ನವನ್ನು ಪ್ರದಾನಮಂತ್ರಿ ನರೇಂದ್ರಮೋದಿ ಅವರು ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್ ಇಂದು ರಸ್ತೆಯಲ್ಲಿ ಸಿಲಿಂಡರ್ ಇಟ್ಟು ಪ್ರತಿಭಟನೆ ಮಾಡುತ್ತಿದೆ ಎಂದು ಟೀಕಿಸಿದರು.
ಬಿಜೆಪಿ ಸರ್ಕಾರವಿದ್ದ ಸಂದರ್ಭ ಜಿಲ್ಲೆಯಲ್ಲಿರುವ ಆನೆ ಕಂದಕವನ್ನು ದುರಸ್ತಿ ಮಾಡುವ ಕೆಲಸವಾಗುತ್ತಿತ್ತು. ಪರಿಣಾಮ ಆನೆ ಮಾನವ ಸಂಘರ್ಷ ಕಡಿಮೆಯಾಗಿತ್ತು. ಆದರೆ, ಇಂದು ಆನೆಕಂದಕಗಳು ದುರಸ್ತಿಗೊಳ್ಳದ ಪರಿಣಾಮ ಆನೆಗಳು ಎಗಿಲ್ಲದೇ ನಾಡಿಗೆ ಬರುತ್ತಿದೆ. ತೋಟಗಳಲ್ಲಿ ಬೀಡುಬಿಡುತ್ತಿದೆ. ಅರಣ್ಯಗಳಲ್ಲಿ ಪ್ರಾಣಿಗಳಿಗೆ ಬೇಕಾದ ಕರೆ ತೆಗೆಯಬೇಕು. ಬಿದಿರನ್ನು ಬೆಳೆಯಲು ಕ್ರಮ ಕೈಗೊಳ್ಳಬೇಕು. ಆದರೆ ಇದ್ಯಾವುದನ್ನು ಮಾಡದೇ ಜನವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಮಾಜಿ ಎಂಎಲ್‌ಸಿ ಸುನಿಲ್ ಸುಬ್ರಮಣಿ ಮಾತನಾಡಿ, ಯುದ್ಧಕ್ಕೆ ನಾವು ಕಾರಣರಲ್ಲ. ಆದರೆ, ಮೋದಿ ಚಾಕಚಕ್ಯತೆಯಿಂದ ಇಂದು ಅನಿಲ, ತೈಲ ಭಾರತಕ್ಕೆ ಬರುವಂತಾಗಿದೆ. ದೇಶ ಸಂಕಷ್ಟದಲ್ಲಿದ್ದಾಗ ದೇಶದ ಪರ, ಸರ್ಕಾರದ ಪರ ಇರಬೇಕು. ಮೋದಿ ಅವರನ್ನು ಅಭಿನಂದಿಸುವ ಕೆಲಸವನ್ನು ಕಾಂಗ್ರೆಸ್ ಮಾಡಬೇಕಿತ್ತು. ಇಂದಿರಾ ಗಾಂಧಿ ಅವರನ್ನು ಯುದ್ಧದ ಸ್ಥಿತಿಯಲ್ಲಿ ವಾಜಪೇಯಿ ಶ್ಲಾಘಿಸಿದ್ದರು ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಜೈನಿ, ಮಾದ್ಯಮ ಪ್ರಮುಖ್ ಸಜಿಲ್ ಕೃಷ್ಣ, ವಕ್ತಾರ ಅರುಣ್ ಕುಮಾರ್ ಉಪಸ್ಥಿತರಿದ್ದರು.







