Breaking News :

ಛತ್ತೀಸ್‌ಗಢ ರಾಜ್ಯದಲ್ಲಿ ಕ್ರೈಸ್ತ ಕನ್ಯಾಸ್ತ್ರೀಯರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿ ಮಡಿಕೇರಿಯಲ್ಲಿ ಪ್ರತಿಭಟನೆ

ಮಡಿಕೇರಿ : ಸುಳ್ಳು ಮೊಕದ್ದಮೆ ಹೂಡಿ ಛತ್ತೀಸ್‌ಗಢ ರಾಜ್ಯದಲ್ಲಿ ಕ್ರೈಸ್ತ ಕನ್ಯಾಸ್ತ್ರೀಯರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿ ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ನೇತೃತ್ವದಲ್ಲಿ ಶನಿವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಜಾನ್ಸನ್ ಪಿಂಟೋ, ಬಿಜೆಪಿ ಸರ್ಕಾರ ಮತ್ತು ಕೋಮುವಾದಿ ಸಂಘಟನೆ ಸೇರಿ ಕ್ರೈಸ್ತ ಕನ್ಯಾಸ್ತ್ರೀಯರನ್ನು ಬಂಧಿಸಿ ೯ ದಿನಗಳ ಕಾಲ ಜೈಲಿನಲ್ಲಿಟ್ಟಿದ್ದರು. ಇಂತಹ ಘಟನೆಗಳು ಮರುಕಳಿಸಬಾರದು ಎಂದ ಅವರು, ಕನ್ಯಾಸ್ತ್ರೀಯರನ್ನು ತಕ್ಷಣ ಬಿಡುಗಡೆ ಮಾಡಬೇಕು. ಸುಳ್ಳು ಮೊಕದ್ದಮೆಯನ್ನು ಹಿಂಪಡೆಯಬೇಕು ಮತ್ತು ಬಂಧಿಸಲು ಕಾರಣಕರ್ತರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕಾರ್ಯಧ್ಯಕ್ಷ ವಿ.ಎ.ಲಾರೆನ್ಸ್ ಮಾತನಾಡಿ, ಛತ್ತೀಸ್‌ಗಢದಲ್ಲಿ ನರ್ಸಿಂಗ್ ಟ್ರೈನಿಂಗ್ ಕೊಡಿಸುವ ಸಲುವಾಗಿ ೨ ಹೆಣ್ಣುಮಕ್ಕಳನ್ನು ಒಬ್ಬ ವ್ಯಕ್ತಿ ಕರೆದುಕೊಂಡು ಹೋಗುತ್ತಿದ್ದರು. ಆದರೆ, ಸಮಾಜಘಾತಕ ಶಕ್ತಿಗಳು ಅವರನ್ನು ಹಿಡಿದು ಮಾನವ ಕಳ್ಳಸಾಗಣೆ ಮತ್ತು ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಂಧಿಸಿದ್ದಾರೆ. ಇದು ಖಂಡನೀಯ ಎಂದರು.

ಕ್ರೈಸ್ತ ಧರ್ಮದಲ್ಲಿ ಮತಾಂತರ ಮಾಡಲು ಕನಿಷ್ಟಪಕ್ಷ ೨ ವರ್ಷವಾಗುತ್ತದೆ. ಆದರೆ, ರಾಜಕೀಯ ಉದ್ದೇಶಕ್ಕಾಗಿ ಮಾನವ ಕಳ್ಳಸಾಗಣೆ, ಮತಾಂತರ ಮಾಡುತ್ತಿದ್ದಾರೆ ಎಂದು ಅಪವಾದ ಮಾಡುವುದು ಸಮಂಜಸವಲ್ಲ ಎಂದರು.

ಈ ಸಂದರ್ಭದಲ್ಲಿ ಪ್ರತಿಭಟನಾ ನಿರತರು ಕನ್ಯಾಸ್ತ್ರೀಯರನ್ನು ತಕ್ಷಣ ಬಿಡುಗಡೆ ಮಾಡಬೇಕು ಮತ್ತು ಸುಳ್ಳು ಮೊಕದ್ದಮೆಯನ್ನು ಹಿಂಪಡೆಯಬೇಕು. ಹಾಗೂ ಬಂಧಿಸಲು ಕಾರಣಕರ್ತರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ಜೋಕೀಂ ರೂಡ್ರಿಗಸ್, ಸಂಘಟನಾ ಕಾರ್ಯದರ್ಶಿ ಮರ್ವಿನ್ ಲೋಬೋ, ಸಂಚಾಲಕ ಜಾನ್ಸನ್, ಪ್ರಮುಖರಾದ ಎಸ್.ಎಂ.ಡಿ ಸಿಲ್ವಾ, ಗೌರವಾಧ್ಯಕ್ಷ ಜೋಕೀಂ ವಾಸು, ಹಾಗೂ ಅಸೋಸಿಯೇಷನ್‌ನ ಪದಾಧಿಕಾರಿಗಳಿದ್ದರು.

Share this article

ಟಾಪ್ ನ್ಯೂಸ್

More News