Breaking News :

ಕೃಷಿ ಪ್ರಶಸ್ತಿಗೆ ರೈತ ಹಾಗೂ ರೈತ ಮಹಿಳೆಯರಿಂದ ಅರ್ಜಿ ಆಹ್ವಾನ


ಕೃಷಿ ಪ್ರಶಸ್ತಿಗೆ ರೈತ ಹಾಗೂ ರೈತ ಮಹಿಳೆಯರಿಂದ ಅರ್ಜಿ ಆಹ್ವಾನ


ಮಡಿಕೇರಿ : ಕೃಷಿ ವಲಯದಲ್ಲಿ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ಕೃಷಿ ಪ್ರಶಸ್ತಿ-ಕೃಷಿ ಉತ್ಪಾದನಾ ಬಹುಮಾನ ಯೋಜನೆಯನ್ನು ಕೃಷಿ ಇಲಾಖಾ ವತಿಯಿಂದ ಅನುಷ್ಠಾನ ಗೊಳಿಸಲಾಗುತ್ತಿದೆ. ಪ್ರತೀ ವರ್ಷದಂತೆ ಈ ವರ್ಷವೂ (2025-26) ಸಹ ರೈತ/ ರೈತ ಮಹಿಳೆಯರಿಂದ ಪ್ರತ್ಯೇಕವಾಗಿ (ಭತ್ತ ಮಳೆಯಾಶ್ರಿತ)) ಬೆಳೆ ಸ್ಪರ್ಧೆಗೆ ಅರ್ಜಿ ಆಹ್ವಾನಿಸಲಾಗಿದೆ.

2025-26 ನೇ ಸಾಲಿನಿಂದ ಅನ್ವಯಿಸುವಂತೆ ಕೃಷಿ ಪ್ರಶಸ್ತಿಗೆ ನಿಗದಿ ಪಡಿಸಲಾಗಿರುವ ಪ್ರವೇಶ ಶುಲ್ಕವನ್ನು ರದ್ದುಪಡಿಸಲಾಗಿದೆ. ಕನಿಷ್ಠ ಒಂದು ಎಕರೆ ಪ್ರದೇಶದಲ್ಲಿ ಸ್ಪರ್ಧಾ ಬೆಳೆ ಬೆಳೆದಿರಬೇಕು. ರೆವಿನ್ಯೂ ದಾಖಲೆ ಪ್ರಕಾರ ಖಾತೆ ಹೊಂದಿರುವ ಹಾಗೂ ಸ್ವತಃ ಬೇಸಾಯದಲ್ಲಿ ತೊಡಗಿರುವ ಸ್ವಯಂ ಕ್ರಿಯಾಶೀಲ ಕೃಷಿಕನಾಗಿರಬೇಕು. ಒಂದೇ ಕುಟುಂಬದ ಎಲ್ಲಾ ಸದಸ್ಯರು (ಗಂಡ, ಹೆಂಡತಿ ಮತ್ತು ಅವಲಂಬಿತ ಮಕ್ಕಳು) ಭಾಗವಹಿಸುವಂತಿಲ್ಲ. ಒಬ್ಬರು ಮಾತ್ರ ಭಾಗವಹಿಸಬಹುದು.

ರಾಜ್ಯ ಮತ್ತು ಜಿಲ್ಲಾ ಮಟ್ಟಗಳಲ್ಲಿ ರಚಿಸಲಾಗಿರುವ ವಿವಿಧ ಸಮಿತಿ/ ತಂಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸದಸ್ಯರುಗಳು ಮತ್ತು ಅವರ ಕುಟುಂಬದ ಸದಸ್ಯರು ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ. ಕೇಂದ್ರ ಅಥವಾ ರಾಜ್ಯ ಸರ್ಕಾರಿ ಸೇವೆಯಲ್ಲಿರುವ ಯಾವುದೇ ಇಲಾಖೆ, ವಿಶ್ವವಿದ್ಯಾಲಯ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ನೌಕರರು ಮತ್ತು ಅವರ ಕುಟುಂಬ ಸದಸ್ಯರು ಭಾಗವಹಿಸುವಂತಿಲ್ಲ.

ಕಟಾವಿಗೆ 15 ದಿನಗಳ ಮುಂಚಿತವಾಗಿ ಸಂಬಂಧಿಸಿದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಕಟಾವು ದಿನಾಂಕವನ್ನು ತಿಳಿಸಬೇಕು. ಬಹುಮಾನದ ಮೊತ್ತ ತಾಲ್ಲೂಕು ಮಟ್ಟ ಪ್ರಥಮ ರೂ.15 ಸಾವಿರ, ದ್ವಿತೀಯ ರೂ.10 ಸಾವಿರ ಮತ್ತು ತೃತೀಯ ರೂ.5 ಸಾವಿರ, ಜಿಲ್ಲಾ ಮಟ್ಟ ಪ್ರಥಮ ರೂ.30 ಸಾವಿರ, ದ್ವಿತೀಯ ರೂ.25 ಸಾವಿರ, ತೃತೀಯ ರೂ.20 ಸಾವಿರ ಹಾಗೂ ರಾಜ್ಯ ಮಟ್ಟದಲ್ಲಿ ಪ್ರಥಮ ರೂ.50 ಸಾವಿರ, ದ್ವಿತೀಯ ರೂ.40 ಸಾವಿರ ಹಾಗೂ ತೃತೀಯ ಬಹುಮಾನ ರೂ.35 ಸಾವಿರ ಆಗಿರುತ್ತದೆ.

ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛೆಯುಳ್ಳ ರೈತ, ರೈತ ಮಹಿಳೆಯರು ಸಂಬಂಧಿಸಿದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಕಂದಾಯ ಇಲಾಖೆಯಿಂದ ಪಡೆದ ಪಹಣಿ ಪತ್ರದೊಂದಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಆಗಸ್ಟ್, 31 ಕೊನೆಯ ದಿನವಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚಂದ್ರಶೇಖರ್ ತಿಳಿಸಿದ್ದಾರೆ.

Share this article

ಟಾಪ್ ನ್ಯೂಸ್

More News