ಜನವಾಹಿನಿ NEWS ಸೋಮವಾರಪೇಟೆ : ಮಡಿಕೇರಿ ತಾಲೂಕಿನ ಮುಕ್ಕೋಡು ಗ್ರಾಮದ ಕಲ್ಲೊಟ್ಸ್ ಗ್ರಾಮದಲ್ಲಿ ಪೈಸಾರಿ ಜಾಗದಲ್ಲಿ ಬೆಳೆದಿದ್ದ ಏಲಕ್ಕಿ ಹಾಗೂ ಕಾಫಿ ಗಿಡಗಳನ್ನು ಅರಣ್ಯ ಇಲಾಖೆಯವರು ಕಡಿದು ಸಂಪೂರ್ಣ ನಾಶಪಡಿಸಿದ ಸ್ಥಳಕ್ಕೆ ರೈತ ಹೋರಾಟ ಸಮಿತಿಯ ಪದಾಧಿಕಾರಿಗಳು ಭೇಟಿ ನೀಡಿ ಅರಣ್ಯ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಪೈಸಾರಿ ಜಾಗದಲ್ಲಿ ಕೃಷಿ ಮಾಡಿಕೊಂಡಿದ್ದ ಕಾಳಚಂಡ ನಾಣಿಯಪ್ಪ ವೃದ್ಧ ದಂಪತಿಯ ಮೇಲೆ ಅರಣ್ಯ ಇಲಾಖೆ ಅಮಾನುಷ ಕೃತ್ಯ ಎಸಗಿದ್ದು, ಫಸಲು ಕೊಡುವ ಹಂತದಲ್ಲಿದ್ದ ಏಲಕ್ಕಿ ಗಿಡಗಳನ್ನು ಸಂಪೂರ್ಣ ಕಡಿದು ನಾಶ ಪಡಿಸಿದ್ದಾರೆ. ಕಾಫಿ ಗಿಡಗಳನ್ನು ನೆಲಸಮಗೊಳಿಸಿ ದೌರ್ಜನ್ಯ ಎಸಗಿದ್ದಾರೆ. ಮುಂದಿನ 10 ದಿನಗಳ ಒಳಗೆ ಈ ಬಗ್ಗೆ ಕ್ರಮವಾಗದಿದ್ದರೆ ಸಾವಿರಾರು ರೈತರಿಂದ ಅರಣ್ಯ ಭವನ ಚಲೋ ಹಮ್ಮಿಕೊಳ್ಳಲಾಗುವುದು ಎಂದು ಸಮಿತಿಯ ಅಧ್ಯಕ್ಷ ಸುರೇಶ್ ಚಕ್ರವರ್ತಿ ಎಚ್ಚರಿಸಿದ್ದಾರೆ.
ಅರಣ್ಯ ಇಲಾಖೆಯವರು ಕಾಫಿ ಹಾಗೂ ಏಲಕ್ಕಿ ತೋಟವನ್ನು ತೆರವುಗೊಳಿಸಿದ ಸ್ಥಳಕ್ಕೆ ತೆರಳಿ ವಾಸ್ತವಾಂಶವನ್ನು ಪರಿಶೀಲಿಸಿದ ಸಮಿತಿಯ ಪದಾಧಿಕಾರಿಗಳು, ಸರ್ಕಾರಿ ಪೈಸಾರಿ ಜಾಗದಲ್ಲಿ ಕೈಗೊಂಡಿದ್ದ ಕಾಫಿ, ಏಲಕ್ಕಿ ಕೃಷಿಯನ್ನು ಸಂಪೂರ್ಣ ನಾಶಮಾಡಿರುವ ಅರಣ್ಯ ಇಲಾಖೆಯ ಕ್ರಮ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಚಕ್ರವರ್ತಿ ಸುರೇಶ್, ಮುಕ್ಕೋಡ್ಲು ಈ ಗ್ರಾಮದಲ್ಲಿ ಹೊಸದಾಗಿ ಮಾಡಿದ್ದ ಕಾಫಿ ತೋಟವನ್ನು ಅರಣ್ಯ ಇಲಾಖೆ ನಾಶ ಪಡಿಸಿದ್ದಾರೆ. ಅರಣ್ಯ ಇಲಾಖೆಯ ಹತ್ತು ಮಂದಿ ಮೊನ್ನೆ ದಿನ ಆಗಮಿಸಿ ಏಲಕ್ಕಿ ಹಾಗೂ ಕಾಫಿ ಗಿಡವನ್ನು ಸಂಪೂರ್ಣವಾಗಿ ತೆರವು ಮಾಡಿದ್ದಾರೆ. 20 ವರ್ಷದ ಗಿಡಗಳನ್ನು ಕಡಿದಿದ್ದಾರೆ. 5 ಲಕ್ಷಕ್ಕೂ ವಾರ್ಷಿಕ ವರಮಾನ ನಾಶಪಡಿಸಿದ್ದಾರೆ. ಕೃಷಿಕ ದಂಪತಿ ವೃದ್ಧರಾಗಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಪ್ರಸ್ತುತ ಕೃಷಿ ಕೈಗೊಂಡಿರುವ ಜಾಗವು ಪೈಸಾರಿ ಎಂಬ ದಾಖಲೆ ಲಭಿಸಿದೆ. ಆದರೂ ಸಹ ಅರಣ್ಯ ಇಲಾಖೆಯವರು ದೌರ್ಜನ್ಯ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಗೂ ಈ ಬಗ್ಗೆ ಕೃಷಿಕ ದಂಪತಿಗೆ ನ್ಯಾಯಕ್ಕಾಗಿ ಹೋರಾಟ ಮಾಡುತ್ತೇವೆ. ಅರಣ್ಯ ಇಲಾಖೆ ಪರಿಹಾರ ನೀಡಬೇಕು. ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳು ಜಿಲ್ಲಾಧಿಕಾರಿಗಳು ಖುದ್ದಾಗಿ ಜಾಗ ಪರಿಶೀಲನೆ ಮಾಡಬೇಕು. ಏಲಕ್ಕಿ ಕೊಯ್ಲು ಮಾಡುವ ಸಂದರ್ಭವೇ ಗಿಡಗಳನ್ನು ತುಂಡರಿಸಿದ್ದಾರೆ. ಜಿಲ್ಲಾಧಿಕಾರಿ ತಕ್ಷಣ ಮಧ್ಯೆ ಪ್ರವೇಶಿಸಿ ಈ ಜಾಗ ಪೈಸಾರಿಯೋ ಅಥವಾ ಅರಣ್ಯ ಇಲಾಖೆಗೆ ಸೇರಿದ್ದೋ ಎಂಬುದನ್ನು ಮೊದಲು ಬಹಿರಂಗಪಡಿಸಲಿ ಎಂದು ಒತ್ತಾಯಿಸಿದರು.
ಸಿ ಮತ್ತು ಡಿ ಜಾಗ ಸಮಸ್ಯೆ, ಸೆಕ್ಷನ್ -4 ಹಾಗೂ ಸೆಕ್ಷನ್-5 ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಸೋಮವಾರಪೇಟೆ ತಾಲೂಕು ಬಂದ್ ಮಾಡಲಾಗಿದೆ. ಬಂದ್ ಆಗಿ 8 ದಿನ ತುಂಬುವುದರೊಳಗೆ ಇಂತಹ ಕೆಲಸ ಮಾಡಿದ್ದಾರೆ. ಕೃಷಿಕರಿಗೆ ನೋಟಿಸ್ ಸಹ ನೀಡಿಲ್ಲ ಯಾವುದೇ ಮಾಹಿತಿಯನ್ನೂ ಕೊಟ್ಟಿಲ್ಲ.50 ವರ್ಷದಿಂದ ಕೃಷಿ ಮಾಡಿಕೊಂಡು ಬಂದಿರುವ ಜಾಗಕ್ಕೆ ದಾಖಲೆ ಒದಗಿಸುವಂತೆ ಈಗಾಗಲೇ ಕಂದಾಯ ಇಲಾಖೆಗೆ 50, 53, 57ರಡಿ ಅರ್ಜಿ ಹಾಕಿದ್ದಾರೆ. ಭೋಗ್ಯದ ಯೋಜನೆಗೂ ಅರ್ಜಿ ಹಾಕಿದ್ದಾರೆ. ಈ ನಡುವೆ ಅರಣ್ಯ ಇಲಾಖೆ ದೌರ್ಜನ್ಯ ಎಸಗಿರುವುದು ಅಕ್ಷಮ್ಯ ಅಪರಾಧ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈಗಾಗಲೇ 33/2 ಸರ್ವೆ ನಂಬರ್ನಲ್ಲಿ ವಿಭಾಗ ಮಾಡಿ 60 ಏಕರೆ ಜಾಗದ ಪೈಕಿ 4.50 ಸೆಂಟ್ ಜಾಗವನ್ನು ಸ್ಥಳೀಯ ವ್ಯಕ್ತಿಗೆ ದಾಖಲಾತಿ ಮಾಡಿಕೊಟ್ಟಿದ್ದಾರೆ. ಇವರಿಗೆ ಮಾತ್ರ ಮಾಡಿಕೊಟ್ಟಿಲ್ಲ. ರೈತರನ್ನು ಕೆರಳಿಸಲು, ಉದ್ದೇಶಪೂರ್ವಕವಾಗಿ ರೈತರನ್ನು ಕೆಣಕುವ ಯತ್ನಕ್ಕೆ ಅರಣ್ಯ ಇಲಾಖೆ ಕೈ ಹಾಕಿದೆ. ಬೆಳೆಯನ್ನು ನಾಶ ಮಾಡಿದ 10 ಮಂದಿ ಅರಣ್ಯ ಇಲಾಖಾ ಸಿಬ್ಬಂದಿಗಳನ್ನು ತಕ್ಷಣ ವಜಾ ಮಾಡಬೇಕು. ಸಿಸಿಎಫ್ ಆದಷ್ಟು ಬೇಗ ಜಾಗ ಪರಿಶೀಲನೆ ಮಾಡಬೇಕು. ಪರಿಹಾರ ಒದಗಿಸಬೇಕು. ಒಂದು ವಾರದೊಳಗೆ ಸ್ಪಂದನಯಿಲ್ಲದಿದ್ದರೆ ಅರಣ್ಯ ಭವನ ಚಲೋ ಮಾಡುತ್ತೇವೆ ಎಂದು ಎಚ್ಚರಿಸಿದರು. ನಾವು ದೇವರಕಾಡು ಜಾಗ ಒತ್ತುವರಿ ಮಾಡಿಕೊಂಡಿಲ್ಲ. ನಮ್ಮೂರಿನಲ್ಲಿರುವ ಪೈಸಾರಿ ಜಾಗ ಒತ್ತುವರಿ ಮಾಡಿಕೊಂಡು ತೋಟ ಮಾಡಿರುವುದಾಗಿ ನಾಣಿಯಪ್ಪ ಹೇಳಿದರೂ ಕೇಳದೇ ಅರಣ್ಯ ಇಲಾಖೆ ದರ್ಪ ಮೆರೆದಿದೆ. ಇದಕ್ಕೆ ತಕ್ಕ ಉತ್ತರವನ್ನು ರೈತರು ನೀಡಲಿದ್ದಾರೆ. ಮುಂದಿನ ದಿನಗಳಲ್ಲಿ ರೈತಪರವಾದ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಚಕ್ರವರ್ತಿ ಸುರೇಶ್ ಹೇಳಿದರು. ಈ ಸಂದರ್ಭ ರೈತ ಹೋರಾಟ ಸಮಿತಿಯ ಸಂಚಾಲಕರುಗಳಾದ ಪ್ರಕಾಶ್ ಕಲ್ಕಂದೂರು, ದಿವಾಕರ್ ಕೂತಿ, ಪೃಥ್ವಿ, ಮಾದಾಪುರದ ನಾಗಂಡ ಭವಿನ್ ಸೇರಿದಂತೆ ಇತರರು ಭೇಟಿ ನೀಡಿ ಕೃಷಿಕ ದಂಪತಿಗಳಿಗೆ ಧೈರ್ಯ ತುಂಬಿದರು.
ಈ ಸಂದರ್ಭ ಕಾಳಚಂಡ ನಾಣಿಯಪ್ಪ, ನಂದಿರ ಸಜನ್. ನಂದಿನ ಸುಜನ್, ನಂದಿರ ಧರ್ಮರಾಯ, ಕಾಳಚಂಡ ಪವನ್, ಕಾಳಚಂಡ ಸುರೇಶ್, ಕಾಳಚಂಡ ರಾಜಾಮಣಿ, ಕಾಳಚಂಡ ಮುತ್ತಾಕಿ, ಕಾಳಚಂಡ ರಮೇಶ್, ನಂದಿರ ನವೀನ್, ತಂಬುಕುತ್ತೀರ ಸುರೇಶ್, ಕುಟ್ಟಂಡ ಕುಟ್ಟಪ್ಪ, ಮೊಣ್ಣಂಡ ಶರ್ವಿನ್, ಕೊಕ್ಕಲೆರ ನಾಣಯ್ಯ ಸೇರಿದಂತೆ ಇತರರು ಇದ್ದರು.








