Breaking News :

ನಗರದ ಕೋಲ್ ಮಂದ್ ಜಾಗದಲ್ಲಿ ಆಲದ ಗಿಡ ನೆಟ್ಟ ಶಾಸಕದ್ವಯರು ಮತ್ತು ಸಂಸದರು

 


ಜನವಾಹಿನಿ News ಮಡಿಕೇರಿ : ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದ ಬಳಿಯ ಕೋಲ್‍ಮಂದ್ ಜಾಗದಲ್ಲಿ ಮಡಿಕೇರಿ ಕೊಡವ ಸಮಾಜ ವತಿಯಿಂದ ಏರ್ಪಡಿಸಲಾಗಿದ್ದ ‘ಆಲದ ಗಿಡ’ ನೆಡುವ ಕಾರ್ಯಕ್ರಮದಲ್ಲಿ ‘ಆಲದ ಗಿಡ’ ನೆಡುವ ಮೂಲಕ ಶಾಸಕದ್ವಯರು ಹಾಗೂ ಸಂಸದರು ಶುಕ್ರವಾರ ಚಾಲನೆ ನೀಡಿದರು.

ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ, ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್‍ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ ಯಲ್ಪಪ್ಪ, ಕೊಡವ ಸಮಾಜದ ಮಾಜಿ ಅಧ್ಯಕ್ಷರಾದ ಕೊಂಗಾಂಡ ಎಸ್.ದೇವಯ್ಯ, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರಾದ ಮಂಡುವಂಡ ಪಿ.ಮುತ್ತಪ್ಪ, ಉಪಾಧ್ಯಕ್ಷರಾದ ಕೆ.ಎ.ದೇವಯ್ಯ, ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ರಾಣಿ ಮಾಚಯ್ಯ, ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷರಾದ ಮುಂಡಂಡ ಸಿ.ನಾಣಯ್ಯ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾದ ಚೊಟ್ಟೆಯಂಡ ಸಂಜು ಕಾವೇರಪ್ಪ, ಓಂಕಾರೇಶ್ವರ ದೇವಾಲಯದ ಅಧ್ಯಕ್ಷರಾದ ಚುಮ್ಮಿ ದೇವಯ್ಯ, ಜಿ.ಪಂ.ಮಾಜಿ ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ, ನಗರಸಭಾ ಸದಸ್ಯರಾದ ಅನಿತಾ ಪೂವಯ್ಯ, ಸದಸ್ಯರಾದ ಅಪ್ಪಣ್ಣ, ಕೊಡವ ಸಮಾಜದ ಕಾರ್ಯದರ್ಶಿ ಬೊಪ್ಪಂಡ ಸರಳ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರಾ ಮೈನಾ ಇತರರು ಇದ್ದರು.

ಬಳಿಕ ಮಾತನಾಡಿದ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ಮಡಿಕೇರಿ ಕೋಲ್ ಮಂದ್ ಜಾಗಕ್ಕೆ 250 ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದ್ದು, ಹುತ್ತರಿ ಹಬ್ಬದ ಸಂದರ್ಭದಲ್ಲಿ ಕೊಡವ ಸಂಸ್ಕøತಿ, ಕಲೆಗಳನ್ನು ಕೋಲ್ ಮಂದ್ ಸ್ಥಳದಲ್ಲಿ ಪ್ರದರ್ಶನ ನಡೆಯುತ್ತಿದ್ದು ವಿಶೇಷವಾಗಿದೆ ಎಂದು ತಿಳಿಸಿದರು.

ಈ ವರ್ಷದ ಮಳೆಗಾಲದಲ್ಲಿ ಬೃಹತ್ ಆಲದ ಮರ ಉರುಳಿ ಬಿದ್ದ ಪರಿಣಾಮವಾಗಿ ನೂತನವಾಗಿ ಆಲದ ಗಿಡವನ್ನು ನೆಟ್ಟು ಬೆಳೆಸುತ್ತಿರುವುದು ಗಮನಾರ್ಹವಾಗಿದೆ. ಕೊಡವ ಕೋಲ್ ಮಂದ್ ಜಾಗಕ್ಕೆ ಪೂಜ್ಯನೀಯ ಸ್ಥಾನವಿದ್ದು, ಜಿಲ್ಲೆಯ ಮಂದ್‍ಗಳನ್ನು ಸಂರಕ್ಷಿಸುವಂತಾಗಬೇಕು ಎಂದು ಎ.ಎಸ್.ಪೊನ್ನಣ್ಣ ಅವರು ಕರೆ ನೀಡಿದರು.

ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವ ಮೂಲಕ ಆಲದ ಗಿಡ ನೆಡಲಾಗಿದ್ದು, ಪೋಷಣೆ ಮಾಡಬೇಕಿದೆ ಎಂದು ಎ.ಎಸ್.ಪೊನ್ನಣ್ಣ ನುಡಿದರು.

ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಮಾತನಾಡಿ ಪ್ರತೀ ಊರಿನಲ್ಲಿಯೂ ಸಹ ಆಲದ ಮರ ಅಥವಾ ಅರಳಿ ಮರ ಇರುವುದನ್ನು ಇಂದಿಗೂ ಸಹ ಕಾಣುತ್ತೇವೆ. ಅದೇ ರೀತಿ ಕೋಲ್ ಮಂದ್ ಸ್ಥಳದಲ್ಲಿ ಕೊಡವ ಸಂಸ್ಕøತಿ ಮತ್ತು ಕಲೆಗಳನ್ನು ಪ್ರದರ್ಶನ ಮಾಡುವುದು ವಿಶಿಷ್ಟವೇ ಸರಿ ಎಂದರು.

ಈ ಜಾಗದ ಅಭಿವೃದ್ಧಿಗೆ ಕೊಡವ ಸಮಾಜದವರು ಮನವಿ ಮಾಡಿದ್ದಲ್ಲಿ ವೈಯಕ್ತಿಕವಾಗಿ ಅಥವಾ ಸರ್ಕಾರದಿಂದ ಅನುದಾನ ಒದಗಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಡಾ.ಮಂತರ್ ಗೌಡ ಅವರು ಪ್ರಕಟಿಸಿದರು.

ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಾತನಾಡಿ ಭಾರತೀಯ ಸಂಸ್ಕøತಿ, ಪರಂಪರೆಯಲ್ಲಿ ಅಶ್ವತ್ಥ ಮರಕ್ಕೆ ಹಿಂದಿನಿಂದಲೂ ವಿಶಿಷ್ಟ ಸ್ಥಾನವಿದ್ದು, ಕೋಲ್ ಮಂದ್ ಜಾಗದಲ್ಲಿ ಹೊಸ ಗಿಡವನ್ನು ನೆಟ್ಟು ಬೆಳೆಸುತ್ತಿರುವುದು ಕೊಡವ ಸಂಸ್ಕøತಿ ಆಚರಣೆ ಉಳಿಸಿಕೊಂಡು ಹೋಗಲು ಸಹಕಾರಿಯಾಗಿದೆ ಎಂದು ಹೇಳಿದರು.

ಕೋಲ್ ಮಂದ್ ಜಾಗವು ಕೊಡವ ಸಂಸ್ಕøತಿಯ ಭಾಗವಾಗಿದ್ದು, ಇದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಸಂಸದರು ತಿಳಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಮಾತನಾಡಿ ಕೋಲ್ ಮಂದ್ ಜಾಗವು ಕೊಡವ ಸಂಸ್ಕøತಿಯ ವಿಶೇಷ ಭಾಗವಾಗಿದೆ. ಕೊಡವ ಸಂಸ್ಕøತಿ ಕಲೆಗಳ ಪ್ರದರ್ಶನದಲ್ಲಿ ಈ ಜಾಗ ಪ್ರಮುಖವಾಗಿದೆ ಎಂದರು.

ಮಡಿಕೇರಿ ಕೊಡವ ಸಮಾಜದ ಉಪಾಧ್ಯಕ್ಷರಾದ ಕೆ.ಎ.ದೇವಯ್ಯ ಅವರು ಸ್ವಾಗತಿಸಿ, ಮಾತನಾಡಿದರು. ದುಡಿ ವಾದ್ಯ ಮೂಲಕ ಗಣ್ಯರನ್ನು ಸ್ವಾಗತಿಸಲಾಯಿತು.

Share this article

ಟಾಪ್ ನ್ಯೂಸ್

More News