ಜನವಾಹಿನಿ News ಮರಗೋಡು : ಹದಗೆಟ್ಟ ರಸ್ತೆಯ ದುಸ್ಥಿತಿಯಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೀವ್ರ ತೊಂದರೆಗಳ ಹಿನ್ನೆಲೆಯಲ್ಲಿ ರಸ್ತೆ ದುರಸ್ತಿಯನ್ನು ತಕ್ಷಣ ಕೈಗೊಳ್ಳಬೇಕೆಂದು ಆಗ್ರಹಿಸಿ ನಾಳೆ (ದಿನಾಂಕ 26/12/2025) ಬೆಳಿಗ್ಗೆ 9 ಗಂಟೆಯಿಂದ ಮರಗೋಡು ಗ್ರಾಮದಲ್ಲಿ ರಸ್ತೆ ತಡೆ ಹಾಗೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಕತ್ತೆಲೆ ಕಾಡು–ಮರಗೋಡು ಮಾರ್ಗದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ಅಸಾಧ್ಯವಾಗುವ ಮಟ್ಟಕ್ಕೆ ರಸ್ತೆ ಕುಸಿದಿದೆ. ಇದರಿಂದ ಶಾಲಾ ಮಕ್ಕಳು, ಕಾರ್ಮಿಕರು, ರೋಗಿಗಳು ಹಾಗೂ ಸಾರ್ವಜನಿಕರು ಪ್ರತಿದಿನ ಅಪಾಯದ ನಡುವೆ ಸಂಚರಿಸುವಂತಾಗಿದೆ.
ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯವನ್ನು ಖಂಡಿಸಿ ನಡೆಯಲಿರುವ ಈ ರಸ್ತೆ ತಡೆ ಹಾಗೂ ಪ್ರತಿಭಟನೆಗೆ ಮರಗೋಡು ವ್ಯಾಪಾರಸ್ಥರು ಅಂಗಡಿ–ಮುಂಗಟ್ಟುಗಳನ್ನು ಮುಚ್ಚಿ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ರಸ್ತೆ ದುರಸ್ತಿ ವಿಳಂಬವಾಗುತ್ತಿರುವುದರಿಂದ ವ್ಯಾಪಾರಕ್ಕೂ ತೀವ್ರ ಹಾನಿ ಉಂಟಾಗಿದೆ ಎಂದು ವರ್ತಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.







