ಜನವಾಹಿನಿ News ಸಿದ್ದಾಪುರ : ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗ ಬಾಣಂಗಾಲದ ಎಲ್ಕಿನ್ ಎಸ್ಟೇಟ್ ನಲ್ಲಿ ಗಿಡದಿಂದಲೆ ಕಾಫಿ ಕಳವು ಮಾಡಿರುವುದಾಗಿ ವ್ಯವಸ್ಥಾಪಕ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕ್ಷಿಪ್ರ ಕಾರ್ಯಾಚ ರಣೆ ನಡೆಸಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾ ಗಿದ್ದಾರೆ.
ತೋಟದ ವ್ಯವಸ್ಥಾಪಕ ಕಾವೇರಪ್ಪ ಸಿಬ್ಬಂದಿಯ ಜತೆ ಡಿ. 27ರ ಮಧ್ಯಾಹ್ನ 2.30ರ ಸುಮಾರಿಗೆ ತೋಟದಲ್ಲಿ ಗಸ್ತು ನಡೆಸುವ ಸಂದರ್ಭದಲ್ಲಿ ಆರ್ಗನಿಕ್ಟಿಬಿ ಬ್ಲಾಕ್ ಬಳಿಯ ರಸ್ತೆಯ ಬದಿ ಸ್ಕೂಟಿಯೊಂದು ನಿಂತಿರುವುದನ್ನು ಕಂಡು ಅನುಮಾನಗೊಂಡ ಸಿಬ್ಬಂದಿ ತೋಟದೊಳಗೆ ನೋಡಿದ ಸಂದರ್ಭ ಇಬ್ಬರು ಗಿಡದಿಂದ ಕಾಫಿ ಹಣ್ಣು ಕಿತ್ತು ಚೀಲಕ್ಕೆ ತುಂಬುತ್ತಿರುವುದನ್ನು ಗಮನಿಸಿ ಗದರಿಸಿದಾಗ ಅವರು ಓಡಿ ಪರಾರಿಯಾಗಿದ್ದರು. ತಕ್ಷಣ ಸ್ಥಳಕ್ಕೆ ಹೋಗಿ ನೋಡಿದಾಗ ಎರಡು ಪ್ಲಾಸ್ಟಿಕ್ ಚೀಲಗಳಲ್ಲಿ ಅಂದಾಜು 100 ಕೆ.ಜಿ. ಕಾಫಿ ಹಣ್ಣು ಕೊಯ್ದಿರುವುದು ಕಂಡು ಬಂದಿದೆ. ಈ ಸಂಬಂಧ ಪೋಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಸ್ಥಳದಲ್ಲಿ ಇದ್ದ ಸ್ಕೂಟಿ (KA12 X 2260) ಯನ್ನು ವಶಕ್ಕೆ ಪಡೆದು, ಆರೋಪಿಗಳಾದ ಅನ್ಸಾರ್ ( 34) ಮತ್ತು ಶಕೀರ್ (27) ಎಂಬವರನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಮಂಜುನಾಥ್, ಎ. ಎಸ್. ಐ ರಾಜೇಶ್, ಶ್ರೀನಿವಾಸ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ಕಳವು ಪ್ರಕರಣ ನಡೆದಿರೋ “ಇವೊಲ್ವ್ ಬ್ಯಾಕ್” ಸಂಸ್ಥೆಗೆ ಸೇರಿದ ತೋಟದ ವಿವಿಧ ಕಡೆ ಕೆಲದಿನಗಳಿಂದ ಲಕ್ಷಾಂತರ ಮೌಲ್ಯದ ಕಾಫಿ ಕಳವಾಗಿದೆ. ಈ ಹಿಂದೆ ಬಿಟಿ ಮರ ಹಾಗೂ ಶ್ರೀಗಂಧದ ಮರ ಕೂಡ ಈ ವ್ಯಾಪ್ತಿಯಲ್ಲಿ ಕಳವಾಗಿದ್ದು, ಇದೆ ಆರೋಪಿಗಳು ಭಾಗಿಯಾಗಿರಬಹುದೆಂಬ ಶಂಕೆ ವ್ಯಕ್ತ ಪಡಿಸಲಾಗಿದೆ. ಈ ಹಿನ್ನೆಲೆ ಸೂಕ್ತ ತನಿಖೆ ನಡೆಸಿದ್ದಲ್ಲಿ ಮಾತ್ರ ಸತ್ಯಾಸತ್ಯತೆ ತಿಳಿದುಬರಲಿದ್ದು, ಪೊಲೀಸ್ ಇಲಾಖೆ ಯಾವ ರೀತಿ ತನಿಖೆ ನಡೆಸಲಿದೆ ಎಂಬುದನ್ನು ಕಾದು ನೋಡಬೇಕಿದೆ.







