ಜನವಾಹಿನಿ News ಸಿದ್ದಾಪುರ : ಕಾಡಾನೆ ತುಳಿತಕ್ಕೆ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಂದು ಮಧ್ಯಾಹ್ನ ಸಿದ್ದಾಪುರ ಸಮೀಪದ ಗೌರಿಬೆಟ್ಟ ವ್ಯಾಪ್ತಿಯಲ್ಲಿ ನಡೆದಿದೆ.
ಬಜೆಗೊಳ್ಳಿ ಬಳಿಯ ಗೌರಿಬೆಟ್ಟ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡಾನೆ ದಾಳಿ ಮಾಡಿದ್ದು, ಹುಂಡಿ ನಿವಾಸಿ ಲತೀಫ್ (65) ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಘಟನೆಯ ಸುದ್ದಿ ಹರಡುತ್ತಿದ್ದಂತೆ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಸೇರಿದ್ದು, ನಿರಂತರ ಆನೆ ದಾಳಿಯಿಂದ ಜೀವ ಭಯದಲ್ಲಿ ಬದುಕುತ್ತಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದರು. ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಈ ದುರ್ಘಟನೆಗೆ ಕಾರಣವೆಂದು ಆರೋಪಿಸಿರುವ ಸಾರ್ವಜನಿಕರು ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಮಾಹಿತಿ ದೊರಕುತ್ತಿದ್ದಂತೆಯೇ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂದಿನ ಕ್ರಮಕ್ಕಾಗಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ.
ನೆನ್ನೆಯಷ್ಟೇ ಇದೆ ವ್ಯಾಪ್ತಿಯಲ್ಲಿ ಕಾಡಾನೆಯೊಂದು ಶಾಲಾ ವಾಹನವನ್ನು ಅಟ್ಟಿಸಿ ಬಂದ ಪ್ರಕರಣ ವರದಿಯಾಗಿತ್ತು. ಅದರ ಬೆನ್ನೆಲೆ ಇಂದು ಕಾರ್ಮಿಕನ ಮೇಲೆ ಆನೆ ದಾಳಿ ಮಾಡಿ ಕೊಂದಿರುವ ಘಟನೆ ನಡೆದಿರುವುದು ಅರಣ್ಯ ಇಲಾಖೆ ಕಾಡಾನೆ ಹಾವಳಿ ನಿಯಂತ್ರಣದಲ್ಲಿ ಎಷ್ಟರ ಮಟ್ಟಿಗೆ ನಿರ್ಲಕ್ಷ್ಯ ವಹಿಸಿದೆ ಎಂಬುವುದಕ್ಕೆ ಸಾಕ್ಷಿ ಎಂಬಂತಿದೆ.
ಇನ್ನಾದರೂ ಇಲಾಖೆ ಹಾಗೂ ಸರಕಾರ ಜನರ ಜೀವದ ಜೊತೆ ಚೆಲ್ಲಾಟ ಆಡದೇ, ಎಚ್ಚೆತುಕೊಂಡು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬುದೇ ಜಿಲ್ಲೆಯ ಜನತೆಯ ಒತ್ತಾಯವಾಗಿದೆ.
ಕಾಡು ಪ್ರಾಣಿಗಳ ಹಾವಳಿಯಿಂದ ಜನ ಪ್ರಾಣ ರಕ್ಷಿಸದೆ ಕೈಕಟ್ಟಿ ಕುಳಿತಿರುವ ಸರಕಾರಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಮತ್ತೆಷ್ಟು ಜೀವ ಬಲಿಬೇಕು ಎಂದು ಪ್ರಶ್ನಿಸಿದ್ದಾರೆ.







