ಜನವಾಹಿನಿ News ಮಡಿಕೇರಿ : ಕೊಡಗು ಜಿಲ್ಲಾ ನಿವೃತ್ತ ಪೊಲೀಸ್ ಕ್ಷೇಮಾಭಿವೃದ್ಧಿ ಸಂಘದಿಂದ ನೀಡಲಾಗುತ್ತಿದ್ದ ಮರಣ ನಿಧಿಯ ಮೊತ್ತ ರೂ.೫ ಸಾವಿರವನ್ನು ರೂ.೧೦ ಸಾವಿರಕ್ಕೆ ಏರಿಕೆ ಮಾಡಲಾಗಿದ್ದು, ಸದಸ್ಯರು ಇದರ ಲಾಭ ಪಡೆದುಕೊಳ್ಳುವಂತೆ ಸಂಘದ ಉಪಾಧ್ಯಕ್ಷ ಚೊಕ್ಕಾಡಿ ಎನ್.ಅಪ್ಪಯ್ಯ ಮನವಿ ಮಾಡಿದರು.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೨೦ ವರ್ಷಗಳಿಂದ ಕೊಡಗು ಜಿಲ್ಲಾ ನಿವೃತ್ತ ಪೊಲೀಸ್ ಕ್ಷೇಮಾಭಿವೃದ್ಧಿ ಸಂಘವು ನಿವೃತ್ತ ಪೊಲೀಸರ ಯೋಗಕ್ಷೇಮಕ್ಕೆ ಬದ್ಧವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಸದಸ್ಯರು ಮರಣ ಹೊಂದಿದಾಗ ಮೃತರ ಕುಟುಂಬಕ್ಕೆ ಸಂಘವು ಮರಣ ನಿಧಿಯ ಮೂಲಕ ರೂ.೫ ಸಾವಿರವನ್ನು ಅಂತ್ಯಕ್ರಿಯೆಯ ಸಂದರ್ಭ ನೀಡುತ್ತಿದೆ. ಈಗ ಇರುವ ರೂ.೫ ಸಾವಿರದ ಮೊತ್ತವನ್ನು ೧೦ ಸಾವಿರಕ್ಕೆ ಏರಿಕೆ ಮಾಡಲು ಸಂಘ ನಿರ್ಧರಿಸಿದೆ. ಏರಿಕೆಯಾದ ಮೊತ್ತವನ್ನು ೨೦೨೭ ಜ.೨೭ ರ ನಂತರ ಮರಣ ಹೊಂದುವ ಸದಸ್ಯರ ಕುಟುಂಬಕ್ಕೆ ನೀಡುವ ನಿಯಮವನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಪ್ರತಿ ವರ್ಷ ಮಾ.೩೧ ರೊಳಗೆ ಆರೋಗ್ಯ ಭಾಗ್ಯ ವಿಮಾ ಶುಲ್ಕವನ್ನು ಪಾವತಿಸುವ ಮೂಲಕ ಸದಸ್ಯರು ಆರೋಗ್ಯ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಚೊಕ್ಕಾಡಿ ಎನ್.ಅಪ್ಪಯ್ಯ ತಿಳಿಸಿದರು.
ಸಂಘದ ಕಾರ್ಯದರ್ಶಿ ಎಂ.ಕೆ.ಕಾವೇರಪ್ಪ ಮಾತನಾಡಿ, ಸಂಘದಲ್ಲಿ ೧೦೫೦ ಸದಸ್ಯರಿದ್ದು, ಮರಣ ನಿಧಿಯ ಮೊತ್ತವನ್ನು ೧೦ ಸಾವಿರಕ್ಕೆ ಏರಿಕೆ ಮಾಡಿರುವ ಕ್ರಮವನ್ನು ೯೦೦ಕ್ಕೂ ಅಧಿಕ ಸದಸ್ಯರು ಒಪ್ಪಿಕೊಂಡಿದ್ದಾರೆ. ಈ ಯೋಜನೆಯ ಸದುಪಯೋಗಕ್ಕಾಗಿ ಈಗಾಗಲೇ ಸುಮಾರು ೨೦೦ ಸದಸ್ಯರು ತಲಾ ರೂ.೧ ಸಾವಿರ ಪಾವತಿಸಿ ಸದಸ್ಯತ್ವ ಪಡೆದುಕೊಂಡಿದ್ದಾರೆ. ಮರಣ ನಿಧಿಗಾಗಿ ಸದಸ್ಯತ್ವ ಪಡೆಯಲು ಆಸಕ್ತಿ ಇರುವವರು ಜೂ.೩೦ ರೊಳಗೆ ಹೆಸರು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದ ಅವರು, ಆಸಕ್ತರು ಮೊ.ಸಂ ೯೪೪೮೫೮೭೯೭೫ ನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.
ಸಂಘದ ನಿರ್ದೇಶಕರುಗಳಾದ ಕೆ.ವೈ.ಹಮೀದ್ ಹಾಗೂ ಎನ್.ಎ.ಜಗದೀಶ್ ಸುದ್ದಿಗೋಷ್ಠಿಯಲ್ಲಿದ್ದರು.







