ಜನವಾಹಿನಿ News ಸಿದ್ದಾಪುರ : ಸಿದ್ದಾಪುರದ ಹಿಂದೂ ಸಂಗಮ ಆಯೋಜನಾ ಸಮಿತಿಯಿಂದ ಫೆ. 23ರಂದು ಸಿದ್ದಾಪುರದಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಮಿತಿ ಪ್ರಮುಖ ರೂಪೇಶ್ ತಿಳಿಸಿದ್ದಾರೆ.
ಸನಾತನ ಸಂಸ್ಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸಿ ಹಿಂದೂ ಧರ್ಮದ ಬಗ್ಗೆ ಅರಿವು ಮೂಡಿಸುವುದು ಹಾಗೂ ಸಾಮಾಜಿಕ ಏಕತೆಗಾಗಿ ಎಲ್ಲ ವರ್ಗದ ಜನರನ್ನು ಒಂದು ವೇದಿಕೆ ಯಡಿ ಸೇರಿಸುವ ಹಾಗೂ ಹಿಂದೂ ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹಿಂದೂ ಸಂಗಮ ನಡೆಸಲಾಗುತ್ತಿದ್ದು, ಕಾರ್ಯಕ್ರಮದ ಭಾಗವಾಗಿ 23ರಂದು ಮಧ್ಯಾಹ್ನ 2.30ಕ್ಕೆ ಸಿದ್ದಾಪುರದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಅವರಣದಿಂದ ಸಿದ್ದಾಪುರದ ಸ್ವರ್ಣಮಾಲಾ ಕಲ್ಯಾಣ ಮಂಟಪದವರೆಗೆ ಬೃಹತ್ ಶೋಭಾಯಾತ್ರೆ ಸಾಗಲಿದೆ.
ಸಂಜೆ 4ಕ್ಕೆ ಸ್ವರ್ಣಮಾಲ ಕಲ್ಯಾಣ ಮಂಟಪದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಹಿಂದೂ ಸಮಾಜದ ಪ್ರಮುಖರು ಭಾಷಣ ಮಾಡಲಿದ್ದಾರೆ. ಸ್ಥಳೀಯ ಎಲ್ಲ ದೇವಾಲಯಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ವಿರಾಜಪೇಟೆ ನಾಟ್ಯಾಂಜಲಿ ನೃತ್ಯ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಕೂಡ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.







