ಜನವಾಹಿನಿ News ಮಡಿಕೇರಿ : ನಗರದ ಜ್ಯೋತಿನಗರದಲ್ಲಿ ನೆಲೆನಿಂತಿರುವ ವನಚಾಮುಂಡೇಶ್ವರಿಯ ಕ್ಷೇತ್ರದಲ್ಲಿ ಬಹ್ಮಕಳಶ ಅಷ್ಟಬಂಧ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಫೆ.೨೬, ೨೭ ರಂದು ನಡೆಯಲಿದೆ.
ನಗರದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಟಿ.ಕೆ.ಸುದೀರ್, ಮಡಿಕೇರಿಯ ಜ್ಯೋತಿನಗರದಲ್ಲಿ ಸುಮಾರು ೪೨೬ ವರ್ಷಗಳಿಂದ ವನಚಾಮುಂಡೇಶ್ವರಿ ನೆಲೆನಿಂತಿದೆ. ಜೀರ್ಣೋದ್ಧಾರ ಕೈಗೊಂಡ ಹಿನ್ನೆಲೆ ಪುನರ್ ಪ್ರತಿಷ್ಠಾ ಅಷ್ಟಬಂದ ಬ್ರಹ್ಮಕಳಸ ಪೂಜಾ ಕಾರ್ಯಕ್ರಮವನ್ನು ತಂತ್ರಿಗಳಾದ ಬ್ರಹ್ಮಶ್ರಿ ಶ್ರೀಕಾಂತ್ ಭಟ್ಟತಿರಿ ಚಾಲೋಡ್ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಫೆ.೨೬ ರಂದು ಪ್ರತಿಷ್ಠಾಪನೆ ಅಂಗವಾಗಿ ಸಂಜೆ ೪ ಗಂಟೆಗೆ ಗಾಂಧಿ ಮೈದಾನದಿಂದ ತಿಮ್ಮಯ್ಯ ವೃತ್ರವಾಗಿ ದೇವಾಲಯದವರೆಗೆ ದೀಪಾಲಂಕೃತ ಮಂಟಪದಲ್ಲಿ ಭವ್ಯ ಕಳಸ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಕಳಸ ಹಾಗೂ ತಾಲಾಪೋಲಿಯೊಂದಿಗೆ, ಚಿಂಗಾರಿಮೇಳ ಹಾಗೂ ಮಂಗಳೂರಿನ ಭಜನ ಕುಣಿತ ತಂಡಗಳು ಮೆರಗು ನೀಡಲಿದೆ ಎಂದು ತಿಳಿಸಿದರು.
ಅಂದು ಸಂಜೆ ೭ ಗಂಟೆಗೆ ಸಾಮೂಹಿಕ ಪ್ರಾರ್ಥನೆ, ೭.೧೫ ರಿಂದ ಆಚಾರ್ಯಾವರಣ, ಗಣಪತಿ ಪೂಜೆ, ಪ್ರಸಾದ ಶುದ್ಧಿ, ವಾಸ್ತು ಬಲಿ, ಭಗವತಿ ಸೇವೆ, ರಾತ್ರಿ ಪೂಜೆ ನಡೆಯಲಿದೆ. ಫೆ.೨೭ ರಂದು ಬೆಳಗ್ಗೆ ೬ ಗಂಟೆಗೆ ಮಹಾಗಣಪತಿ ಹೋಮ, ಉಷ ಪೂಜೆ, ಅನುಜ್ಞಾಕಲಶಾಭಿಷೇಕ, ಪ್ರಾರ್ಥನೆ, ಜೀವೋದ್ವಾಸನ, ಬಿಂಭ ಶುದ್ಧಿ, ದ್ಯಾನಾಧಿವಾಸಂ, ಪ್ರಾಸಾದ ಪ್ರತಿಷ್ಠೆ, ಪೀಠ ಪ್ರತಿಷ್ಠೆ, ಹಗಲು ೧೧.೧೨ ರಿಂದ ೧೧.೩೪ ರವರೆಗಿನ ಕುಂಭ ಲಗ್ನ ಶುಭಮುಹೂರ್ತದಲ್ಲಿ ಬಿಂಭಪ್ರತಿಷ್ಠೆ, ಕಲಾಭಿಷೇಕ ಪೂಜೆ, ಮಹಾಪೂಜೆ ನಡೆಯಲಿದೆ. ಅಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ ಅವರು, ಮಾ.೩ ರಂದು ದೇವಾಲಯದ ವಾರ್ಷಿಕ ಪೂಜೆ ನಡೆಯಲಿದೆ. ಬೆಳಗ್ಗೆ ೧೦ ಗಂಟೆಗೆ ಬಲಿಪೂಜೆ, ೧೨ ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ ಎಂದು ತಿಳಿಸಿದರು.
ವನಚಾಮುಂಡೇಶ್ವರಿ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಒ.ಎನ್.ಬಾಬು, ಉಪಾಧ್ಯಕ್ಷ ಕೆ.ಎನ್.ಗುರುಪ್ರಸಾದ್, ಕಾರ್ಯದರ್ಶಿ ಎನ್.ಸಿ.ಸುನಿಲ್, ಧರ್ಮದರ್ಶಿ ಎಂ.ಕೆ.ನಂಜಪ್ಪ, ಕೆ.ಆರ್.ನಾಗೇಶ್ ಸುದ್ದಿಗೋಷ್ಠಿಯಲ್ಲಿದ್ದರು.







