Breaking News :

ಮಾ.11ರಿಂದ ಸರಕಾರಿ ವೈದ್ಯಾಧಿಕಾರಿಗಳ ಅನಿರ್ಧಿಷ್ಟಾವಧಿ ಮುಷ್ಕರ

 


ಜನವಾಹಿನಿ News ಮಡಿಕೇರಿ : ಖಾಲಿ ಹುದ್ದೆಗಳ ಭರ್ತಿ, ಔಷಧಿ ಸರಬರಾಜು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳುವುದಾಗಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ.ಎಂ.ಆನಂದ್ ಎಚ್ಚರಿಸಿದರು.

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಸೇರಿದಂತೆ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಕಾಲಕಾಲಕ್ಕೆ ಸಮರ್ಪಕವಾಗಿ ಇಲಾಖೆಯಿಂದ ಔಷಧಿಗಳನ್ನು ಸರಬರಾಜು ಮಾಡಬೇಕು. ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಮಾಡಬೇಕು. ಇಲಾಖೆಯ ಎಲ್ಲಾ ವೃಂದಗಳ ಜೇಷ್ಠತಾ ಪಟ್ಟಿಯನ್ನು ಕಾಲಕಾಲಕ್ಕೆ ಪ್ರಕಟಿಸಬೇಕು. ಎಲ್ಲಾ ವೃಂದದ ಅಧಿಕಾರಿ, ನೌಕರರಿಗೆ ಮುಂಬಡ್ತಿ ನೀಡಬೇಕು. ಉನ್ನತ ವ್ಯಾಸಾಂಗಕ್ಕೆ ಅವಕಾಶ ನೀಡಬೇಕು. ವರ್ಗಾವಣೆ ಕಾಯ್ದೆಗೆ ಮಾರ್ಪಾಡು, ಖಾಲಿ ಹುದ್ದೆ ಭರ್ತಿ ಮಾಡಬೇಕು ಸೇರಿ ೧೨ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು. ಮೊದಲ ಹಂತದಲ್ಲಿ ಮಾ.೧೧ರಿಂದ ಕಪ್ಪು ಪಟ್ಟಿ ಧರಿಸಿ ತುರ್ತು ಸೇವೆ ನಿರ್ವಹಿಸಲಾಗುವುದು. ಸರ್ಕಾರ ಸ್ಪಂದಿಸದಿದ್ದಲ್ಲಿ ಮಾ.೧೬ರಿಂದ ಬೇಡಿಕೆ ಈಡೇರುವವರೆಗೂ ಅನಿರ್ದಿಷ್ಟಾವಧಿವರೆಗೆ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಕೇಂದ್ರ ಸಂಘ ಹಾಗೂ ಇಲಾಖೆಯ ಎಲ್ಲಾ ವೃಂದ ಸಂಘದವರು ಗೈರು ಹಾಜರಾಗಿ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕರ್ನಾಟಕ ಸರ್ಕಾರಿ ನೌಕರರ ಸಂಘದ ಕೊಡಗು ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ಆರೋಗ್ಯ ಇಲಾಖೆಯ ಸೇವೆ ಅತ್ಯಗತ್ಯವಾಗಿರೋದ್ರಿಂದ ಮುಷ್ಕರ ಆರಂಭಕ್ಕೂ ಮುನ್ನ ಸರ್ಕಾರ ಎಚ್ಚೆತ್ತು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಹದೇವಪ್ಪ ಮಾತನಾಡಿ, ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿದಂತೆ ಎಲ್ಲಾ ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿಯ ಸೇವೆಯನ್ನು ಖಾಯಂಗೊಳಿಸಬೇಕು. ಸೇವಾ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿದರು.

ಕೊಡಗು ಜಿಲ್ಲಾ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಜಿ.ವಿ.ಶ್ರೀನಾಥ್, ಫಾರ್ಮಸಿ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷೆ ಎಸ್.ವಿ.ನಾಗಮಣಿ, ನೇತ್ರ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಎಸ್.ಚೇತನ್ ಸುದ್ದಿಗೋಷ್ಠಿಯಲ್ಲಿದ್ದರು.

Share this article

ಟಾಪ್ ನ್ಯೂಸ್

More News