Breaking News :

ನಾಪೋಕ್ಲು ಹಲ್ಲೆ ಪ್ರಕರಣದ ಆರೋಪಿಗಳ ಗಡಿಪಾರಿಗೆ ಜಿಲ್ಲಾ ಬಿಜೆಪಿ ಆಗ್ರಹ


ಜನವಾಹಿನಿ News ಮಡಿಕೇರಿ : ನಾಪೋಕ್ಲಿನಲ್ಲಿ ಹಿಂದೂ ಸಂಗಮ ಪ್ರಚಾರದ ವೇಳೆ ನಡೆದ ಹಲ್ಲೆ ಪ್ರಕರಣದ ಆರೋಪಿತರನ್ನು ಜಿಲ್ಲೆಯಿಂದ ಗಡಿಪಾರು ಮಾಡಿ, ಶಾಂತಿ ಸುವ್ಯವಸ್ಥೆ ಕಾಪಾಡಲು ಕ್ರಮ ವಹಿಸಬೇಕೆಂದು ಕೊಡಗು ಬಿಜೆಪಿ ಪೊಲೀಸ್ ಇಲಾಖೆಯನ್ನು ತಾಕೀತು ಮಾಡಿದೆ.

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಎಂಎಲ್ಸಿ ಸುನಿಲ್ ಸುಬ್ರಮಣಿ, ಪಕ್ಷಾತೀತವಾಗಿ ಎಲ್ಲರ ಬೆಂಬಲದೊಂದಿಗೆ ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದರೂ, ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲ ಹಿಂದೂಗಳನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಮಾದಕ ದ್ರವ್ಯಗಳ ಬಳಕೆಯೂ ಹೆಚ್ಚುತ್ತಿರುವುದು ಇಂಥಹ ಘಟನೆಗಳಿಗೆ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಿಂದಿನ ಎಸ್ಪಿ ಕೆ.ರಾಮರಾಜನ್ ಅವಧಿಯಲ್ಲಿ ಡ್ರಗ್ಸ್ ವಿರುದ್ಧ ನಡೆಯುತ್ತಿದ್ದ ಕಟ್ಟುನಿಟ್ಟಿನ ಕಾರ್ಯಾಚರಣೆಯನ್ನು ಪೊಲೀಸ್ ಇಲಾಖೆ ಮುಂದುವರಿಸಬೇಕೆಂದು ಒತ್ತಾಯಿಸಿದರು.

ನಾಪೋಕ್ಲಿನಲ್ಲಿ ಹಲ್ಲೆ ಆರೋಪಿತರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗಿದೆ. ಅಪಾರ ಸಂಖ್ಯೆಯ ಕಾರ್ಯಕರ್ತರು ಸೇರಿ ಒತ್ತಡ ಹಾಕಿದ್ದರಿಂದ ಪರಿಸ್ಥಿತಿಯ ಗಂಭೀರತೆ ಅರಿತ ಪೊಲೀಸರು ತಕ್ಷಣ ಕ್ರಮಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್ಪಿ ಅವರಿಗೆ ಧನ್ಯವಾದ ತಿಳಿಸುವುದಾಗಿ ಹೇಳಿದ ಅವರು, ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲ ಹಾಡಹಗಲೇ ಹಿಂದೂಗಳ ಮೇಲೆ ಧಾಳಿಗಳು ಪುನರಾವರ್ತನೆಯಾಗುತ್ತಿವೆ ಎಂದು ಆರೋಪಿಸಿದರು.

ಪಕ್ಷದ ಮುಖಂದಡ ಮಹೇಶ್ ಜೈನಿ ಮಾತನಾಡಿ, ಒಂದು ವರ್ಗವನ್ನು ಒಲೈಸಲು ಇನ್ನೊಂದು ವರ್ಗವನ್ನು ಎತ್ತಿಕಟ್ಟುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮುಂದುವರಿಸಿದೆ ಎಂದು ಆರೋಪಿಸಿದ ಅವರು, ಕಾರ್ಯಕರ್ತರಿಗೆ ನೋವಾದರೆ ಯಾವುದೇ ಕಾರಣಕ್ಕೂ ಬಿಜೆಪಿ ಸಹಿಸಿಕೊಳ್ಳುವುದಿಲ್ಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ ಯಾವುದೇ ಪ್ರಕರಣದಲ್ಲಿ ಪೊಲೀಸರ ಮೇಲೆ ಒತ್ತಡ ಹಾಕಿಲ್ಲ ಎಂದ ಅವರು, ಎಲ್ಲಾ ಪಕ್ಷದವರನ್ನೂ ಸೇರಿಸಿ ಹಿಂದೂ ಸಂಗಮ ನಡೆಸಲಾಗುತ್ತಿದ್ದು, ಇದನ್ನು ಸಹಿಸದ ಕಿಡಿಗೇಡಿಗಳು ಶಾಂತಿ ಕದಡಲು ಯತ್ನಿಸಿದ್ದಾರೆ. ಮಗುವನ್ನು ಚಿವುಟಿ ತೊಟ್ಟಿಲು ತೂಗುವ ಕೆಲಸವನ್ನು ಕಾಂಗೆಸ್ ಮಾಡುತ್ತಿದೆ ಎಂದು ಅವರು ಚೇಡಿಸಿದರು.

ಮಡಿಕೇರಿ ತಾಲೂಕು ಮಂಡಲ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ವಕ್ತಾರರಾದ ಬಿ.ಕೆ.ಅರುಣ್ ಕುಮಾರ್, ಮಾದ್ಯಮ ಪ್ರಮುಖ್ ಶಜಿಲ್ ಕೃಷ್ಣನ್ ಸುದ್ದಿಗೋಷ್ಠಿಯಲ್ಲಿದ್ದರು.

Share this article

ಟಾಪ್ ನ್ಯೂಸ್

More News