ಜನವಾಹಿನಿ News ಮಡಿಕೇರಿ : ಶಾಂತಿ ಸೌಹಾರ್ದತೆಗೆ ಧಕ್ಕೆ ಉಂಟುಮಾಡುತ್ತಿರುವವರನ್ನು ಕೊಡಗಿನಿಂದ ಗಡಿಪಾರು ಮಾಡಬೇಕೆಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮನು ಮುತ್ತಪ್ಪ ಒತ್ತಾಯಿಸಿದರು.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಪೋಕ್ಲುವಿನಲ್ಲಿ ಕ್ಷುಲಕ ಕಾರಣಕ್ಕೆ ಹಲ್ಲೆ ಪ್ರಕರಣಗಳು ಸಾಮಾನ್ಯವಾಗಿದ್ದು, ಭಯದ ವಾತಾವರಣ ಸೃಷ್ಠಿಯಾಗಿದೆ. ಇತ್ತೀಚೆಗೆ ಹಿಂದೂ ಸಂಗಮ ಕಾರ್ಯಕ್ರಮದ ತಯಾರಿಗಾಗಿ ತಮ್ಮ ಸ್ವಂತ ವಾಹನದಲ್ಲಿ ಬಂದ ಕಾರ್ಯಕರ್ತ ಗೌತಮ್ ನಾಪೋಕ್ಲುವಿನ ಸೂಪರ್ ಮಾರ್ಕೆಟ್ನಿಂದ ಸಾಮಗ್ರಿ ಖರೀದಿಸಿ ಹೊರಬಂದಾಗ ಆಲ್ಟೋ ಕಾರಿನಲ್ಲಿ ಬಂದ ಯುವಕರು, ವಾಹನದಲ್ಲಿ ಭಗವಾಧ್ವಜ ಕಟ್ಟುವಷ್ಟು ಧೈರ್ಯವಿದೆಯಾ ಎಂದು ಪ್ರಶ್ನಿಸಿ ನಾಪೋಕ್ಲು ನಮ್ಮದೆಂದು ಹೇಳಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇಲ್ಲಿನ ಸೌಹಾರ್ದತೆಯನ್ನು ಹಾಳುಮಾಡಲು ಪ್ರಯತ್ನ ಪಟ್ಟವರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಮನುಮುತ್ತಪ್ಪ ಆಗ್ರಹಿಸಿದರು.
ನಾಪೋಕ್ಲು ಗಾಂಜ ವೆಸನಿಗಳ ಗೂಡಾಗಿದೆ ಎಂದು ಆರೋಪಿಸಿದ ಅವರು, ನಾಪೋಕ್ಲು ವ್ಯಾಪ್ತಿಯಲ್ಲಿ ಬಲಿಷ್ಠವಾದ ಪೊಲೀಸ್ ಠಾಣೆ ನಿರ್ಮಾಣವಾಗಬೇಕು. ಅಕ್ರಮ ಚಟುವಟಿಕೆಯನ್ನು ಮಟ್ಟಹಾಕಬೇಕು ಎಂದು ಒತ್ತಾಯಿಸಿದ ಅವರು, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪ್ರಭಾವಿ ವ್ಯಕ್ತಿಯಾಗಿದ್ದು, ಅವರ ಮಾತನ್ನು ಮೀರಿ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗುವುದಿಲ್ಲ ಎಂದು ಆರೋಪಿಸಿದರು.
ಮಕ್ಕಿ ಶಾಸ್ತಾವು ದೇವಸ್ಥಾನದಲ್ಲಿ ಆಣೆ ಪ್ರಮಾಣ ಮಾಡಲು ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸವಾಲೊಡ್ಡಿರುವ ಬಗ್ಗೆ ಪ್ರತಿಕ್ರಿಯಿಸಿದ ಮನು ಮುತ್ತಪ್ಪ, ಮಕ್ಕಿ ಶಾಸ್ತಾವು ದೇವಸ್ಥಾನಕ್ಕೆ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಬರುವುದೇ ಬೇಡ. ಅವರು ಬಂದರೆ ಅಲ್ಲಿನ ಪಾವಿತ್ರ್ಯತೆ ಹಾಳಾಗುತ್ತದೆ ಎಂದು ಟೀಕಿಸಿದರು.
ಗ್ರಾ.ಪಂ ಸದಸ್ಯ ಪ್ರದೀಪ್ ಮಾತನಾಡಿ, ಅನ್ಯಾಯ ನಡೆದಾಗ ಪಕ್ಷಾತೀತ, ಧರ್ಮಾತೀತವಾಗಿ ಖಂಡನೆ ಮಾಡಿದರೆ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದರು.
ಪಾರಾಣೆ ಗ್ರಾ.ಪಂ ಅಧ್ಯಕ್ಷ ಕಟ್ಟಿ ಕುಶಾಲಪ್ಪ, ಬಲ್ಲಮಾವಟಿ ಗ್ರಾ.ಪಂ ಸದಸ್ಯ ಮಣವಟ್ಟಿರ ಹರೀಶ್ ಕುಶಾಲಪ್ಪ, ಪ್ರಮುಖರಾದ ಶಿವಚಾಳಿಯಂಡ ಜಗದೀಶ್, ಚಂಗೇಟಿರ ಸೋಮಣ್ಣ ಸುದ್ದಿಗೋಷ್ಠಿಯಲ್ಲಿದ್ದರು.






