ಜನವಾಹಿನಿ News ಮಡಿಕೇರಿ : ನಗರದ ಹೊರವಲಯದ ಇಬ್ಬಿವಳವಾಡಿ ಗ್ರಾಮದಲ್ಲಿ ಹುಲಿಯ ಚಲನವಲನ ಕಂಡು ಬಂದಿದ್ದು, ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಮಡಿಕೇರಿ ನಗರದಿಂದ ಕೇವಲ ಎರಡು ಕೀ.ಮೀ.ದೂರದಲ್ಲಿರುವ ಇಬ್ಬಿವಳವಾಡಿ ಗ್ರಾಮದ ಪೊನ್ನಚೆಟ್ಟರ ಸಂದೀಪ್ ಎಂಬವರ ತೋಟದಲ್ಲಿ ಹುಲಿ ಓಡಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆ ಭಾಗದ ಏಳೆಂಟು ಕಿ.ಮೀ ವ್ಯಾಪ್ತಿಯಲ್ಲಿ ಹುಲಿಯನ್ನು ಹೋಲುವ ಪ್ರಾಣಿಯ ಓಡಾಟದ ಬಗ್ಗೆ ಮಾಹಿತಿ ಇತ್ತು. ಅದು ಹುಲಿಯೋ, ಪೆರ್ಪಣವೋ ಎಂಬ ಗೊಂದಲವೂ ಇತ್ತು. ಇದೀಗ ಅದು ಹುಲಿ ಎಂಬುದು ಖಚಿತವಾಗಿದ್ದು, ಅರಣ್ಯ ಇಲಾಖೆಯು ಸ್ಥಳದಲ್ಲಿ ಕ್ಯಾಮೆರಾ ಟ್ರ್ಯಾಪ್ಗಳನ್ನು ಅಳವಡಿಸಿದ್ದು, ನಿರಂತರ ನಿಗಾ ಇರಿಸಿದೆ. ಹುಲಿ ಸೆರೆ ಹಿಡಿಯಲು ಕಾರ್ಯಾಚರಣೆ ತೀವ್ರ ಗೊಳಿಸುವಂತೆ ಮಡಿಕೇರಿ ಶಾಸಕ ಮಂತರ್ ಗೌಡ ಅವರು ಕೂಡ ಸೂಚನೆ ನೀಡಿದ್ದು, ಹುಲಿಯನ್ನು ಸೆರೆಹಿಡಿಯಲು ಸರಕಾರದ ಅನುಮತಿ ಕೋರಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಮಾಹಿತಿ ನೀಡಿದ್ದಾರೆ.
ಆತಂಕ: ಊರ ಹಬ್ಬ ಭದ್ರಕಾಳಿ ದೇವರ ಉತ್ಸವ ಕೂಡ ನಡೆಯುತ್ತಿರುವ ಸಂದರ್ಭ ಗ್ರಾಮದಲ್ಲಿ ವ್ಯಾಘ್ರ ಓಡಾಟ ಖಚಿತವಾಗಿರುವ ಹಿನ್ನೆಲೆ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.







