ಜನವಾಹಿನಿ News ನಾಪೋಕ್ಲು : ನಿಯಂತ್ರಣ ತಪ್ಪಿದ ಜೀಪೊಂದು ಕಾಫಿ ತೋಟದೊಳಗೆ ಪಲ್ಟಿಯಾಗಿ ಬೆಳೆಗಾರರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಾಪೋಕ್ಲು ಸಮೀಪದ ಬಲ್ಲಮಾವಟಿ ಪೇರೂರು ಗ್ರಾಮದಲ್ಲಿ ನಡೆದಿದೆ.
ಅಪಘಾತದಲ್ಲಿ ಪೇರೂರು ಗ್ರಾಮದ ಕಾಫಿ ಬೆಳೆಗಾರ ಬೊಟ್ಟೋಳಂಡ ಶರಿ ಮೇದಪ್ಪ (54) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತೋಟದಿಂದ ಸೌದೆ ತುಂಬಿ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭ ಇಳಿಜಾರು ರಸ್ತೆಯಲ್ಲಿ ಶರಿ ಮೇದಪ್ಪ ಚಲಾಯಿಸುತ್ತಿದ್ದ ಜೀಪ್ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಅವಘಡದಿಂದ ಶರಿಮೇದಪ್ಪ ಅವರ ಹೊಟ್ಟೆಯ ಭಾಗಕ್ಕೆ ತೀವ್ರ ಪಟ್ಟಾಗಿದ್ದು ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವಘಡ ಸಂದರ್ಭ ಜೀಪಿನಲ್ಲಿದ್ದ ಇಬ್ಬರು ಕಾರ್ಮಿಕರು ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ನಾಪೋಕ್ಲು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು , ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.







