Breaking News :

ಫೆ.10 ರಂದು ರಾಷ್ಟ್ರೀಯ ಜಂತುಹುಳು ನಿವಾರಣ ಕಾರ್ಯಕ್ರಮ: 1,31,783 ಮಕ್ಕಳಿಗೆ ಮಾತ್ರೆ ವಿತರ

 


ಜನವಾಹಿನಿ News ಮಡಿಕೇರಿ : ಮಕ್ಕಳಿಗೆ ಹುಟ್ಟಿನಿಂದ 16 ವರ್ಷಗಳ ವರೆಗೆ ನೀಡುವ ವಿವಿಧ ಲಸಿಕೆಗಳನ್ನು ನೀಡಿರುವ ಬಗ್ಗೆ ಪ್ರಗತಿ ಪರಿಶೀಲನೆ ಮಾಡಲಾಯಿತು. ಈ ಸಂದರ್ಭದಲ್ಲಿ ವಿರಾಜಪೇಟೆ ಮತ್ತು ಮಡಿಕೇರಿ ತಾಲೂಕಿನಲ್ಲಿ ನಿಗದಿತ ಗುರಿ ತಲುಪಿರುವುದಿಲ್ಲ, ಇದರ ಬಗ್ಗೆ ಹೆಚ್ಚಿನ ಗಮನ ಹರಿಸಿ ಎಲ್ಲಾ ಮಕ್ಕಳಿಗೂ ಎಲ್ಲಾ ನಿಗದಿತ ಲಸಿಕೆಗಳನ್ನು ನೀಡಲು ಮಾನ್ಯ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಸೂಚಿಸಿದರು.

ನಂತರ ವಿಪಿಡಿ ಸರ್ವೇಕ್ಷಣಾ ಕಾರ್ಯಕರ್ಮದಲ್ಲಿ ನಿಗದಿತ ಗುರಿ ತಲುಪಿರುವುದಾಗಿ ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಅವರು ಮಾಹಿತಿ ನೀಡಿದರು.

ರಾಷ್ಟ್ರೀಯ ಜಂತುಹುಳು ನಿವಾರಣ ಕಾರ್ಯಕ್ರಮವು ಜಿಲ್ಲೆಯಲ್ಲಿ ಫೆಬ್ರವರಿ, 10 ರಂದು ನಡೆಯಲಿದ್ದು, 1 ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಜಂತುಹುಳು ನಿವಾರಣೆಯ ಅಲ್ಪೆಂಡಜೋಲ್ ಮಾತ್ರೆ ವಿತರಿಸಬೇಕು. ಅರ್ಹ ಮಕ್ಕಳು ಇದರಿಂದ ಹೊರಗುಳಿಯಬಾರದು ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸರ್ಕಾರದ ನಿರ್ದೇಶನದಂತೆ ಕಾರ್ಯಕ್ರಮ ಅನುಷ್ಠಾನಕ್ಕೆ ಕ್ರಮವಹಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಆರ್‍ಸಿಎಚ್ ಅಧಿಕಾರಿ ಡಾ.ಮಧುಸೂದನ್ ಅವರು ಮಾತನಾಡಿ, ಜಂತು ಹುಳು ಇರುವ ಮಕ್ಕಳು ಅಪೌಷ್ಠಿಕತೆ ಮತ್ತು ರಕ್ತಹೀನತೆಯಿಂದ ಬಳಲುತ್ತಾರೆ. ಆದರಿಂದ ಅವರ ದೈಹಿಕ, ಮಾನಸಿಕ ಬೆಳವಣಿಗೆ ಕುಂಠಿತವಾಗುವುದರೊಂದಿಗೆ ಶೈಕ್ಷಣಿಕ ಬೆಳವಣಿಗೆ ಸಹ ಕಡಿಮೆಯಾಗುವ ಕಾರಣದಿಂದ ಎಲ್ಲಾ 1 ರಿಂದ 19 ವರ್ಷದ ಮಕ್ಕಳು ಜಂತು ಹುಳು ನಿವಾರಣೆ ಮಾತ್ರೆಗಳನ್ನು ತೆಗೆದುಕೊಳ್ಳಬೇಕು ಎಂದರು.

ಫೆಬ್ರವರಿ, 10 ರಂದು ಎಲ್ಲೆಡೆ “ರಾಷ್ಟ್ರೀಯ ಜಂತು ಹುಳು ನಿವಾರಣಾ ಕಾರ್ಯಕ್ರಮ”(ಎನ್.ಡಿ.ಡಿ) ನಡೆಯಲಿದ್ದು, ಫೆ.16 ರಂದು ಮಾಪ್ ಆಪ್ ದಿನ ಕಾರ್ಯಕ್ರಮ ನಡೆಯಲಿದೆ. ರಾಷ್ಟ್ರೀಯ ಜಂತು ಹುಳು ನಿವಾರಣಾ ಕಾರ್ಯಕ್ರಮದಲ್ಲಿ 1-5 ವರ್ಷದ ಒಳಗಿನ ಮಕ್ಕಳಿಗೆ ಅಂಗನವಾಡಿಗಳಲ್ಲಿ ಮಾತ್ರೆ ನೀಡಲಾಗುತ್ತದೆ. 6 ರಿಂದ 19 ವರ್ಷದ ಮಕ್ಕಳಿಗೆ ಎಲ್ಲಾ ಸರಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆ, ಕಾಲೇಜು ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರೆಗಳನ್ನು ನೀಡಲಾಗುತ್ತದೆ. ಆಶಾ ಕಾರ್ಯಕರ್ತೆಯರು ಒಂದರಿಂದ ಹತ್ತೊಂಬತ್ತು ವರ್ಷದೊಳಗಿನ ಅಂಗನವಾಡಿ ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳ ಪಟ್ಟಿಯನ್ನು ತಯಾರಿಸಿ ಮನೆ ಮನೆಗೆ ಭೇಟಿ ನೀಡಿ ಮಾತ್ರೆ ನೀಡಲಿದ್ದಾರೆ ಎಂದು ಡಾ.ಮಧುಸೂದನ್ ಅವರು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ 1 ರಿಂದ 2 ವರ್ಷದೊಳಗಿನ ಮಕ್ಕಳಿಗೆ ಅರ್ಧ ಅಲ್ಪೆಂಡಜೋಲ್ ಮಾತ್ರೆ ಹಾಗೂ 2 ರಿಂದ 19 ವರ್ಷದೊಳಗಿನ ಮಕ್ಕಳಿಗೆ ಒಂದು ಅಲ್ಪೆಂಡಜೋಲ್ ಮಾತ್ರೆ ನೀಡಬೇಕಿದೆ ಎಂದು ಆರ್‍ಸಿಎಚ್ ಅಧಿಕಾರಿ ಅವರು ವಿವರಿಸಿದರು.

ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ವಿವಿಧ ಇಲಾಖೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಸಹಕಾರ ಅಗತ್ಯ ಎಂದು ಕೋರಿದರು.

ರಾಷ್ಟ್ರೀಯ ಜಂತು ಹುಳು ನಿವಾರಣಾ ಕಾರ್ಯಕ್ರಮಕ್ಕೆ (ಎನ್‍ಡಿಡಿ) ಕೊಡಗು ಜಿಲ್ಲೆಯಲ್ಲಿ 1 ರಿಂದ 19 ವರ್ಷದೊಳಗಿನ ಮಕ್ಕಳ ಗುರಿ 1,31,783 ಹೊಂದಿದ್ದು, ಇದರಲ್ಲಿ ಅಂಗನವಾಡಿ ಮಕ್ಕಳು 24,408, ಅಂಗನವಾಡಿಯಿಂದ ಹೊರಗುಳಿದ ಮಕ್ಕಳು 1,448, ಎಲ್ಲಾ ಸರಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಯಲ್ಲಿರುವ ಮಕ್ಕಳು 82,232 ಹಾಗೂ ಪದವಿ ಪೂರ್ವ ತರಗತಿಯಲ್ಲಿ 10,760, ಹಾಗೆಯೇ ಪದವಿ ಕಾಲೇಜಿನ 6,517, ಐಟಿಐ/ಡಿಪ್ಲೋಮಾ 2,916 ವಿದ್ಯಾರ್ಥಿಗಳಿಗೆ ಮಾತ್ರೆಗಳನ್ನು ವಿತರಿಸಲು ಸಂಬಂಧಪಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಈಗಾಗಲೇ ನೀಡಲಾಗಿದೆ ಎಂದರು.

ಎನ್‍ಡಿಡಿ ಕಾರ್ಯಕ್ರಮಕ್ಕೆ ಅವಶ್ಯಕತೆಯಿರುವ ಅಲ್ಪೆಂಡಜೋಲ್ 400 ಎಂ.ಜಿ ಮಾತ್ರೆಗಳನ್ನು ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮುಖಾಂತರ ಎಲ್ಲಾ ಶಾಲೆ, ಕಾಲೇಜು ಹಾಗೂ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ನಗರಸಭೆಯ ಅಧಿಕಾರಿಗಳು ಹಾಗೂ ಇತರೆ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.

Share this article

ಟಾಪ್ ನ್ಯೂಸ್

More News