ಜನವಾಹಿನಿ News ಪುತ್ತೂರು : ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ ನಡೆದ ಕೋಟಿ ಚೆನ್ನಯ ಜೋಡುಕರೆ ಕಂಬಳದಲ್ಲಿ ಕೋಣ ಓಡಿಸುವ ವೇಗದಲ್ಲಿ ಹೊಸ ದಾಖಲೆ ನಿರ್ಮಾಣ ಗೊಂಡಿದೆ ಎಂದು ಕಂಬಳದ ಆಯೋಜಕರು ತಿಳಿಸಿದ್ದಾರೆ.
ಶ್ರೀ ಪಂಚಲಿಂಗೇಶ್ವರ ಉರುವಾಲು ನಾರಾಳುಗುತ್ತು ಸದಾನಂದ ಗೌಡ ಅವರ ಕುಟ್ಟಿ – ಕಾಲೆ ಕೋಣಗಳ ಜೋಡಿ ನೇಗಿಲು ಕಿರಿಯ ವಿಭಾಗ ಸ್ಪರ್ಧೆಯಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಈ ಕೋಣಗಳನ್ನು ಪಡು ಸಾಂತೂರಿನ 22 ವರ್ಷ ಪ್ರಾಯದ ಪೃಥ್ವಿರಾಜ್ ಪೂಜಾರಿ ಎಂಬ ಯುವಕ ಓಡಿಸಿದ್ದು, ಅವರು ಈ ಮೂಲಕ ಕಂಬಳ ಕರೆಯ ವೇಗದ ಓಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಈ ಕೋಣಗಳು 125 ಮೀಟರ್ ಉದ್ದದ ಕರೆಯನ್ನು 10.65 ಸೆಕೆಂಡ್ಗಳಲ್ಲಿ ಕ್ರಮಿಸಿ ಗುರಿ ಮುಟ್ಟಿವೆ. ಲೆಕ್ಕಾಚಾರದಂತೆ 100 ಮೀಟರ್ ದೂರವನ್ನು 8.52 ಸೆಕೆಂಡ್ಗಳಲ್ಲಿ ತಲುಪಿವೆ. ಕೋಣಗಳನ್ನು. ಪೃಥ್ವಿರಾಜ್ ಪೂಜಾರಿ ಓಡಿಸಿದ್ದರು.
ಕಂಬಳದ ಅತಿವೇಗದ ಓಟಗಾರ ಎಂಬ ದಾಖಲೆಯನ್ನು ಮೊದಲು 2021ರಲ್ಲಿ ಮಿಜಾರು ಅಶ್ವತ್ಥಪುರದ ಶ್ರೀನಿವಾಸ ಗೌಡ ನಿರ್ಮಿಸಿದ್ದರು.
ಕಳೆದ ತಿಂಗಳು ಮಂಗಳೂರಿನಲ್ಲಿ ನಡೆದ ರಾಮ – ಲಕ್ಷ್ಮಣ ಜೋಡುಕರೆ ಕಂಬಳದ ನೇಗಿಲು ಹಿರಿಯ ವಿಭಾಗದ ಅಂತಿಮ ಸ್ಪರ್ಧೆಯಲ್ಲಿ ಶ್ರೀಕಾ ಸಂದೀಪ್ ಶೆಟ್ಟಿ ಅವರ ಗಾಂಧಿ ಮೈದಾನ ಸಂತು – ಸುರತ್ಕಲ್ ಪಾಂಚ ಕೋಣಗಳು 125 ಮೀಟರ್ ದೂರವನ್ನು 10.87 ಸೆಕೆಂಡ್ಗಳಲ್ಲಿ ಕ್ರಮಿಸಿದ್ದವು. ಈ ಕೋಣಗಳನ್ನು ಕುಂದ ಬಾರಂದಾಡಿ ಮಾಸ್ತಿಕಟ್ಟೆಯ ಸ್ವರೂಪ್ ಕುಮಾರ್ ಎಂಬುವರು ಓಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದರು. ಅವರು ಶ್ರೀನಿವಾಸ ಗೌಡರ ದಾಖಲೆಯನ್ನು ಮುರಿದಿದ್ದರು.
ಪೃಥ್ವಿರಾಜ್ ಹೊಸ ದಾಖಲೆ: ಪೃಥ್ವಿರಾಜ್ ಪೂಜಾರಿ ಅವರು ಉಡುಪಿ ಪಡು ಸಾಂತೂರಿನವರು. ಡಿಪ್ಲೋಮಾ ಸಿವಿಲ್ ಇಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಇವರು 3 ವರ್ಷಗಳಿಂದ ಕಂಬಳದ ಕೋಣಗಳನ್ನು ಓಡಿಸುತ್ತಿದ್ದಾರೆ. ಇದೀಗ ಪೃಥ್ವಿರಾಜ್ ಎಲ್ಲಾ ದಾಖಲೆ ಮುರಿದು ಹೊಸ ದಾಖಲೆ ಸೃಷ್ಠಿಸಿದ್ದಾರೆ







