ಜನವಾಹಿನಿ NEWS ಸಿದ್ದಾಪುರ : ಸಮೀಪದ ಕಾವೇರಿ ನದಿ ದಡದ ಕಾಫಿ ಎಸ್ಟೇಟ್ ನಲ್ಲಿ ನೆಲೆಗೊಂಡಿರುವ ಶ್ರೀ ಮುನೇಶ್ವರ ದೇವಾಲಯದ ಆವರಣದಲ್ಲಿ ಪ್ರತಿಸ್ಥಾಪನೆಗೊಂಡಿರುವ ಚಾಮುಂಡೇಶ್ವರಿ, ಗುಳಿಗ ಹಾಗೂ ನಾಗ ದೇವರ ವಾರ್ಷಿಕ ಪೂಜಾ ಕೈಂಕರ್ಯಗಳು ಮಂಗಳವಾರ ಸ್ಥಳೀಯರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಸುಮಾರು 80 ವರ್ಷಗಳ ಹಿನ್ನೆಲೆಯುಳ್ಳ ಈ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಮುನೇಶ್ವರ ಹಾಗೂ ಪರಿವಾರ ದೈವಗಳಿಗೆ ದೇವಾಲಯ ಪೂಜಾರಿ ಅಯ್ಯ ರವರ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿತು.
ಮದ್ಯಾಹ್ನದ ಬಲಿ ಪೂಜೆ ಬಳಿಕ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭ ಪ್ರಮುಖರಾದ ಚಂದ್ರ, ರಿವರ್ ಸೈಡ್ ಎಸ್ಟೇಟ್ ಮಾಲೀಕ ಚೆಂದಂಡ ಚುಮ್ಮಿ ಪೂವಯ್ಯ, ಬಾಲು, ತಂಗಮ್ಮ, ಸುಬ್ರಮಣಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು.









