ಜನವಾಹಿನಿ News ಮಡಿಕೇರಿ : ಅಧಿಕಾರದ ವಿಕೇಂದ್ರೀಕರಣದ ಪ್ರಮುಖ ಘಟ್ಟವಾದ ಜಿ.ಪಂ ಮತ್ತು ತಾ.ಪಂ ಚುನಾವಣೆ ವಿಳಂಬಕ್ಕೆ ಹಿಂದಿನ ಬಿಜೆಪಿ ಸರ್ಕಾರವೇ ಕಾರಣ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಆರೋಪಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ 2021 ರ ಮಾರ್ಚ್ ನಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಆಡಳಿತ ಅವಧಿ ಮುಗಿದಿತ್ತು.ಅಂದಿನ ಬಿಜೆಪಿ ನೇತೃತ್ವದ ಸರ್ಕಾರ 26-4-2021 ರಂದು ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಗಳಿಗೆ ಆಡಳಿತಾಧಿಕಾರಿ ನೇಮಕ ಮಾಡಿ ಆದೇಶ ಹೊರಡಿಸಿತ್ತು.
( ಸರ್ಕಾರದ ಆದೇಶ ಸಂಖ್ಯೆ:ಗ್ರಾ.ಅ.ಪಂ.ರಾ.212.ಜಿ.ಪ.ಸ 2021). ನಂತರ ಸಿದ್ದತೆ ಮಾಡಿಕೊಂಡು ಚುನಾವಣೆ ನಡೆಸುವ ಬದಲಿಗೆ ದಿನಾಂಕ 18-9-2021 ರಂದು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ತಿದ್ದುಪಡಿ ಅಧಿನಿಯಮ 2021 ರಂದು ಜಾರಿಗೊಳಿಸಿತ್ತು.
ತಿದ್ದುಪಡಿಗೆ ಅನುಗುಣವಾಗಿ ದಿನಾಂಕ 13-10-2021 ರಂದು ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವನ್ನು ರಚನೆ ಮಾಡಿ ಅಂದಿನ ಬಿಜೆಪಿ ಸರ್ಕಾರ ಅಧಿಸೂಚನೆ ಹೊರಡಿಸಿತ್ತು.
( ಸರ್ಕಾರದ ಅಧಿಸೂಚನೆ.ಸಂಖ್ಯೆ: ಗ್ರಾ.ಅ.ಪಂ.ರಾ.319.ಜಿ.ಪ.ಸ. 2021).
ಅಂದಿನ ಸರ್ಕಾರದ ಆಧಿಸೂಚನೆ ಮೇರೆಗೆ ನಿವೃತ್ತ ಐ.ಎ.ಎಸ್ ಅಧಿಕಾರಿ ಎಂ.ಲಕ್ಷ್ಮೀ ನಾರಾಯಣ ರವರ ನೇತೃತ್ವದಲ್ಲಿ ರಚನೆಯಾದ ಸೀಮಾ ನಿರ್ಣಯ ಆಯೋಗದ ಶಿಫಾರಸ್ಸಿನ ಮೇರೆಗೆ ದಿನಾಂಕ 1-3-2023 ರಂದು ಕರಡು ಪ್ರತಿಯನ್ನು ಹೊರಡಿಸಿ ಆಕ್ಷೇಪಣೆ ಸಲ್ಲಿಸಲು ಕೋರಿದ್ದರು.
ಅಂದಿನ ಬಿಜೆಪಿ ಮುಖಂಡರ ಹಸ್ತಕ್ಷೇಪದ ಹಿನ್ನಲೆಯಲ್ಲಿ ಕರಡು ಪ್ರತಿಯಲ್ಲಿ ಅನೇಕ ಲೋಪಗಳು ಇದ್ದವು.ಸೀಮಾ ಗಡಿ ಗುರತಿಸುವಿಕೆ ಅವೈಜ್ಞಾನಿಕ ವಾಗಿ ಇದ್ದವು.ಕೆಲವು ಪಂಚಾಯತ್ ಗಳ ಗ್ರಾಮಗಳನ್ನು ವಿಭಜಿಸಲಾಗಿತ್ತು.
ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ 40 ಸಾವಿರ ಜನ ಸಂಖ್ಯೆ ನಿಗದಿ ಪಡಿಸಿದ ಕಾರಣ ಅನೇಕ ಕ್ಷೇತ್ರಗಳು ಮಾಯವಾಗಿದ್ದವು.
ಕೊಡಗು ಜಿಲ್ಲೆಯಲ್ಲಿ ನಾಲ್ಕು ಜಿಲ್ಲಾ ಪಂಚಾಯತ್ ಕ್ಷೇತ್ರಗಳನ್ನು ಕಡಿತಗೊಳಿಸಲಾಗಿತ್ತು.ಇಂತಹ ಅನೇಕ ಲೋಪಗಳು ಕಂಡು ಬಂದದ್ದರಿಂದ ರಾಜ್ಯಾದ್ಯಂತ ಬಹುತೇಕ ಜಿಲ್ಲೆಗಳಿಂದ ಉಚ್ಚ ನ್ಯಾಯಾಲದಲ್ಲಿ ಆಕ್ಷೇಪಣೆ ಸಲ್ಲಿಸಲಾಗಿರತ್ತು.
ನ್ಯಾಯಾಲಯದಲ್ಲಿ ಪ್ರಕರಣ ಮುಂದುವರಿಯುತ್ತಾ ಬಂದಿದ್ದರಿಂದ ನಂತರ ಬಂದ ಕಾಂಗ್ರೆಸ್ ಸರ್ಕಾರಕ್ಕೆ ಚುನಾವಣೆ ನಡೆಸುವ ಇಂಗಿತವಿದ್ದರೂ ಚುನಾವಣೆ ನಡೆಸಲು ಆಗಲಿಲ್ಲ.
ವಸ್ತುಸ್ಥಿತಿ ಹೀಗಿದ್ದರೂ ಕೊಡಗು ಜಿಲ್ಲಾ ಬಿಜೆಪಿ ಯವರು ಪ್ರತಿಭಟನೆ ನಡೆಸಿರುವುದು ಹಾಸ್ಯಾಸ್ಪದವಾಗಿದೆ ಎಂದು ತೆನ್ನಿರ ಮೈನಾ ಕಟುವಾಗಿ ಟೀಕಿಸಿದ್ದಾರೆ.
ತಮ್ಮ ಅಧಿಕಾರ ಅವಧಿಯಲ್ಲಿ ತಪ್ಪುಗಳನ್ನು ಮಾಡಿ ಅಧಿಕಾರದ ವಿಕೇಂದ್ರೀಕರಣಕ್ಕೆ ದ್ರೋಹ ಬಗೆದಿರುವ ಬಿಜೆಪಿ ಯವರು ಈಗ ಜನರ ದಿಕ್ಕು ತಪ್ಪಿಸಲು ನಕಲಿ ಹೋರಾಟ ಮಾಡಲು ಹೊರಟಿದ್ದಾರೆ ಎಂದು ತೆನ್ನಿರ ಮೈನಾ ಮೂದಲಿಸಿದ್ದಾರೆ.







