Breaking News :

ಆಸ್ತಿ – ಸರಕಾರಿ ನೌಕರಿ ಮೇಲಿನ ಮೋಹಕ್ಕೆ ಸುಪಾರಿ ಕೊಟ್ಟು ಹೆತ್ತ ತಾಯಿಯನ್ನೇ ಕೊಂದ ಮಗಳು

 


ಜನವಾಹಿನಿ NEWS ಜೈಪುರ : ಸರ್ಕಾರಿ ಕೆಲಸ ಮತ್ತು ಆಸ್ತಿ ತನ್ನದಾಗಿಸಿಕೊಳ್ಳಲು ಕರುಳು ಹಂಚಿಕೊಂಡು ಹುಟ್ಟಿದ ಮಗಳೇ ತಾಯಿಯನ್ನು ಹತ್ಯೆ ಮಾಡಿಸಿದ ಆಘಾತಕಾರಿ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಘಟನೆಯಲ್ಲಿ ಕುಟುಂಬದ ಸಂಬಂಧಿಗಳೂ ಭಾಗಿಯಾಗಿರುವುದು ಸಂಚಲನ ಸೃಷ್ಟಿಸಿದೆ.

ನೀರಜ್ ಶರ್ಮಾ ಮೃತ ಮಹಿಳೆ. ಈಕೆಯ ಮಗಳು ಆಯುಷಿ ಸೇರಿ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ತಾಯಿಯನ್ನು ಕೊಲೆ ಮಾಡುವ ಮೊದಲು ಆಕೆಯ ಮೇಲೆ ಮಾಟಮಂತ್ರ ಕೂಡ ಮಾಡಿಸಿದ್ದೂ ಗೊತ್ತಾಗಿದೆ. ಅದಕ್ಕೆ ಸಂಬಂಧಿಸಿದ ವಸ್ತುಗಳು ಮನೆಯಲ್ಲಿ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರು ಗುದ್ದಿಸಿ ಕೊಲೆ : ತನಿಖೆಯ ವೇಳೆ ಆರೋಪಿಗಳು ಆಘಾತಕಾರಿ ಮಾಹಿತಿಯನ್ನು ಬಾಯಿಬಿಟ್ಟಿದ್ದಾರೆ. ಮಹಿಳೆ ನೀರಜ್ ಶರ್ಮಾ ಅವರ ಕೊಲೆಗೆ ಹಲವು ದಿನಗಳಿಂದ ಸಂಚು ರೂಪಿಸುತ್ತಿದ್ದರು. ಒಂದು ತಿಂಗಳ ಹಿಂದೆ, ಆರೋಪಿಗಳು ಭರತ್‌ಪುರದಿಂದ ಥಾರ್ ಎಸ್‌ಯುವಿಯಲ್ಲಿ ಆಕೆಯನ್ನು ಜೈಪುರಕ್ಕೆ ಕರೆತಂದಿದ್ದರು. ಅಲ್ಲಿ ಆಕೆಗೆ ಕಾರು ಗುದ್ದಿಸಿ ಕೊಲ್ಲುವ ಯತ್ನ ವಿಫಲವಾಗಿತ್ತು. ಆ ಬಳಿಕ, ಜುಲೈ 4 ರಂದು, ಪಕ್ಕಾ ಪ್ಲಾನ್ ಮಾಡಿ ಆಕೆಗೆ ಕಾರು ಗುದ್ದಿಸಿ ಹತ್ಯೆ ಮಾಡಲಾಗಿದೆ. ಇದನ್ನು ಅಪಘಾತ ಎಂದು ಬಿಂಬಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಸಂಬಂಧಿಕರ ಜೊತೆಗೂಡಿ ಸ್ಕೆಚ್ :


ಈ ಕೃತ್ಯಕ್ಕೆ ಆಯುಷಿಗೆ ಆಕೆಯ ಸ್ವಂತ ಮಾವ (ತಾಯಿಯ ಇನ್ನೊಬ್ಬ ಸಹೋದರ), ಕಸಿನ್ ಮತ್ತು ಇತರ ನಾಲ್ವರು ಸಂಬಂಧಿಕರು ಸಾಥ್ ನೀಡಿದ್ದರು. ತಾಯಿಯನ್ನು ಅಪಘಾತದ ರೂಪದಲ್ಲಿ ಕೊಂದರೆ ಯಾರೂ ಅನುಮಾನಿಸುವುದಿಲ್ಲ ಮತ್ತು ತಾಯಿಯ ಮರಣದ ನಂತರ ಅನುಕಂಪದ ಆಧಾರದಲ್ಲಿ ತನಗೇ ಆ ಸರ್ಕಾರಿ ಕೆಲಸ ಸಿಗುತ್ತದೆ ಎಂದು ಆಯುಷಿ ನಂಬಿದ್ದಳು. ಈ ಕೊಲೆಗಾಗಿ ಸುಪಾರಿ ಕೂಡ ನೀಡಲಾಗಿತ್ತು.

ಪ್ರಕರಣವನ್ನು ಭೇದಿಸಿರುವ ಪೊಲೀಸರು ಮಗಳು ಆಯುಷಿ ಸೇರಿದಂತೆ ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ. ಆಸ್ತಿ ಮತ್ತು ಕೆಲಸಕ್ಕಾಗಿ ಹೆತ್ತ ತಾಯಿಯನ್ನೇ ಬಲಿ ಪಡೆದ ಮಗಳ ಕ್ರೌರ್ಯಕ್ಕೆ ಜೈಪುರದ ಜನತೆ ಬೆಚ್ಚಿಬಿದ್ದಿದ್ದಾರೆ.

Share this article

ಟಾಪ್ ನ್ಯೂಸ್

More News