Breaking News :

ಚೆಯ್ಯಂಡಾಣೆಯಲ್ಲಿ ರಾಜ್ಯೋತ್ಸವ ಕ್ರೀಡಾ ಸಂಭ್ರಮಕ್ಕೆ ಅದ್ಧೂರಿ ಚಾಲನೆ – ಹಾಕಿಯಲ್ಲಿ ಕೊಕೇರಿ ತಂಡ ಫೈನಲ್ ಪ್ರವೇಶ

 

 


ಜನವಾಹಿನಿ ನ್ಯೂಸ್ ಚೆಯ್ಯಂಡಾಣೆ : ಕನ್ನಡ ರಾಜ್ಯೋತ್ಸವದ ಅಂಗವಾಗಿ ಚೆಯ್ಯಂಡಾಣೆ ರಾಜ್ಯೋತ್ಸವ ಕ್ರೀಡಾ ಸಮಿತಿಯ ವತಿಯಿಂದ ಚೆಯ್ಯಂಡಾಣೆ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿರುವ ರಾಜ್ಯೋತ್ಸವ ಕ್ರೀಡಾ ಸಂಭ್ರಮಕ್ಕೆ ಅದ್ಧೂರಿ ಚಾಲನೆ ದೊರೆತಿದೆ.

ನ. 8ರವರೆಗೆ ನಡೆಯಲಿರುವ ಕ್ರೀಡಾಕೂಟದಲ್ಲಿ ನರಿಯಂದಡ, ಕೊಕೇರಿ ಹಾಗೂ ಚೇಲಾವರ ಗ್ರಾಮಗಳ ತಂಡಗಳು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದು, ಗ್ರಾಮದಲ್ಲಿ ಕ್ರೀಡಾ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಚೆಯ್ಯಂಡಾಣೆ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಂಚು ಗೌತಮಿ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಇದೊಂದು ಉತ್ತಮ ಕ್ರೀಡಾಕೂಟವಾಗಿದ್ದು, ಮೂರು ದಿನಗಳ ಕ್ರೀಡಾ ಸಂಭ್ರಮ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯೋತ್ಸವ ಕ್ರೀಡಾಕೂಟ ಸಮಿತಿಯ ಅಧ್ಯಕ್ಷ ಚೇನಂಡ ಸಂಪತ್ ಮಾತನಾಡಿ, ಕ್ರೀಡೆಯು ಪ್ರತಿಯೊಬ್ಬರ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಅತ್ಯಂತ ಪೂರಕವಾಗಿದೆ. 1980ರಿಂದ ನಮ್ಮ ಹಿರಿಯರು ಆರಂಭಿಸಿದ ಈ ಕ್ರೀಡಾಕೂಟ ಇಂದಿಗೂ ನಿರಂತರವಾಗಿ ನಡೆದುಕೊಂಡು ಬರುತ್ತಿರುವುದು ಹೆಮ್ಮೆಯ ವಿಚಾರ. ಮುಂದಿನ ವರ್ಷಗಳಲ್ಲಿಯೂ ಕ್ರೀಡಾಕೂಟ ಇದೇ ರೀತಿ ಮುಂದುವರಿಯಲು ಮೂರು ಗ್ರಾಮಗಳ ಜನರ ಬೆಂಬಲ ಹಾಗೂ ಸಹಕಾರ ಅಗತ್ಯ ಎಂದರು.

ಹಾಕಿ ಪಂದ್ಯಾಟದಲ್ಲಿ ಕೊಕೇರಿಗೆ ಜಯ

ಕ್ರೀಡಾಕೂಟದ ಮೊದಲ ಪಂದ್ಯವಾಗಿ ನರಿಯಂದಡ ಹಾಗೂ ಕೊಕೇರಿ ತಂಡಗಳ ನಡುವೆ ನಡೆದ ಹಾಕಿ ಪಂದ್ಯಾಟಕ್ಕೆ ಚೇನಂಡ ಜೆಪ್ಪು ದೇವಯ್ಯ ಹಾಗೂ ಮಚ್ಚಂಡ ರಂಜು ಚಂಗಪ್ಪ ಅವರು ಹಾಕಿ ಸ್ಟಿಕ್ ಮೂಲಕ ಚೆಂಡನ್ನು ದೂಡುವ ಮೂಲಕ ಚಾಲನೆ ನೀಡಿದರು.

ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಕೊಕೇರಿ ತಂಡವು ನರಿಯಂದಡ ತಂಡವನ್ನು 4-1 ಗೋಲುಗಳ ಅಂತರದಿಂದ ಸೋಲಿಸಿ ಫೈನಲ್ ಪ್ರವೇಶಿಸಿತು. ಇದೀಗ ಫೈನಲ್ ಪಂದ್ಯದಲ್ಲಿ ಕೊಕೇರಿ ಹಾಗೂ ಚೇಲಾವರ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಮುಖಾಮುಖಿಯಾಗಲಿವೆ.

ಇತರ ಪಂದ್ಯಾಟಗಳು

ಕ್ರೀಡಾಕೂಟದಲ್ಲಿ ತ್ರೋಬಾಲ್‌ನಲ್ಲಿ ಚೇಲಾವರ ಹಾಗೂ ನರಿಯಂದಡ, ವಾಲಿಬಾಲ್‌ನಲ್ಲಿ ನರಿಯಂದಡ ಹಾಗೂ ಚೇಲಾವರ, ಟೆನ್ನಿಕಾಯ್ಟ್‌ನಲ್ಲಿ ಕೊಕೇರಿ ಹಾಗೂ ಚೇಲಾವರ ತಂಡಗಳು ಸೆಣಸಾಡಲಿವೆ. ಮಹಿಳೆಯರ ಹಗ್ಗಜಗ್ಗಾಟದಲ್ಲಿ ಕೊಕೇರಿ ಹಾಗೂ ನರಿಯಂದಡ ತಂಡಗಳ ನಡುವೆ ಪೈಪೋಟಿ ನಡೆಯಲಿದೆ.

ಹಿರಿಯರು ಆರಂಭಿಸಿದ ಕ್ರೀಡಾ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿರುವ ಈ ಕ್ರೀಡಾಕೂಟವು ಮೂರು ಗ್ರಾಮಗಳ ಜನರನ್ನು ಒಗ್ಗೂಡಿಸುವ ವೇದಿಕೆಯಾಗಿದ್ದು, ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳಲ್ಲಿ ವಿಶೇಷ ಉತ್ಸಾಹ ಮೂಡಿಸಿದೆ.

ಈ ಸಂದರ್ಭದಲ್ಲಿ ಚೇನಂಡ ಜೆಪ್ಪು ದೇವಯ್ಯ, ಮಚ್ಚಂಡ ರಂಜು ಚಂಗಪ್ಪ, ನರಿಯಂದಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ, ಸಮಿತಿಯ ಅಧ್ಯಕ್ಷ ಚೇನಂಡ ಸಂಪತ್, ಉಪಾಧ್ಯಕ್ಷ ಚೆಯ್ಯಂಡ ನಂದ ನಾಚಪ್ಪ, ಕಾರ್ಯದರ್ಶಿ ಕುಟ್ಟನ ಸುನಿಲ್, ಕೋಶಾಧಿಕಾರಿ ಬಿದ್ದಂಡ ನಮೂ ಚಿಯಣ್ಣ, ಸಂಚಾಲಕ ಬೆಳಿಯಂಡ್ರ ಹರಿಪ್ರಸಾದ್, ಚೇರುವಳಂಡ ಆಶಾ, ಶಿಕ್ಷಕಿ ಚೆಯ್ಯಂಡ ಲೀಲಾವತಿ, ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Share this article

ಟಾಪ್ ನ್ಯೂಸ್

More News