Breaking News :

ಸಾಹಿತಿ ನಾ.ಡಿಸೋಜಾ ಅವರು ವಿಶ್ವಮಾನವತ್ವ ಮೇಳೈಸಿದ ದಾರ್ಶನಿಕ

 


ಜನವಾಹಿನಿ ನ್ಯೂಸ್ ಮಡಿಕೇರಿ : ನಾ.ಡಿಸೋಜಾ ಅವರು ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿಶಿಷ್ಠ ಛಾಪು ಮೂಡಿಸಿದ್ದಾರೆ. ಮಲೆನಾಡಿನ ಜನಜೀವನದ ನೋವು ನಲಿವುಗಳಿಗೆ ಅಕ್ಷರ ರೂಪ ಕೊಟ್ಟ ಪರಿಸರ ಪ್ರೇಮಿ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ ಮುನೀರ್ ಅಹಮದ್ ನುಡಿದರು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಸಹಯೋಗದಲ್ಲಿ ನಡೆದ ನಾ ಡಿಸೋಜಾ ಮಕ್ಕಳ ಸಾಹಿತ್ಯ ಪುರಸ್ಕಾರ ಕಾರ್ಯಕ್ರಮದಲ್ಲಿ ನಾ.ಡಿಸೋಜಾ ಅವರ ಸಾಹಿತ್ಯದ ಕುರಿತು ಉಪನ್ಯಾಸ ನೀಡುತ್ತಿದ್ದರು.

ಲೇಖಕ ತನ್ನ ಬುದ್ದಿ, ಮನಸ್ಸಿನ ಭಾವನೆ, ಕಲ್ಪನೆ ಮತ್ತು ಜೀವನ ತತ್ವಗಳಿಗೆ ಸೃಜನಾತ್ಮಕ ರೂಪಕೊಟ್ಟಾಗ ಅದು ಉತ್ತಮ ಕೃತಿಯಾಗುತ್ತದೆ. ಅಂತಹ ಕೃತಿಗಳು ಜನ ಜೀವನಕ್ಕೆ ದೀಪದ ಬೆಳಕನ್ನು ನೀಡುತ್ತವೆ. ಕೃತಿಗಳನ್ನು ರಚಿಸಿದವರು ನಾ. ಡಿಸೋಜಾ ಅವರು ಎಂದರು.

ನಾ.ಡಿಸೋಜಾ ಅವರು ಕೇವಲ ಸಾಹಿತಿಗಳಲ್ಲ, ಕೇವಲ ಕಥೆಗಾರರಲ್ಲ, ನಾಡು ಮೆಚ್ಚಿದ ಪ್ರಖ್ಯಾತ ಸಾಹಿತಿ ಮಾತ್ರವಲ್ಲ, ಲೇಖನಿಯಿಂದ ಬರೀ ಪುಸ್ತಕಗಳ ಶಿಖರ ಕಟ್ಟಿದವರೂ ಅಲ್ಲ. ಅವರು ಅತ್ಯಂತ ಪ್ರಖರವಾದ ವೈಚಾರಿಕ ಪ್ರಜ್ಞೆಯ ಚಿಂತಕರು. ಸರ್ವಧರ್ಮ ಸಮಭಾವ ಪ್ರತಿಪಾದಕ ಎಂದು ಹೇಳಬಹುದು. ಅವರು ವಿಶ್ವ ಮಾನವತ್ವ ಮೇಳೈಸಿಕೊಂಡ ದಾರ್ಶನಿಕ ಎಂದು ನುಡಿದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ ಕೇಶವ ಕಾಮತ್ ರವರು ಅಪಾರ ಪರಿಸರ ಕಾಳಜಿಯುಳ್ಳ ಮಹತ್ವದ ಕಥೆಗಾರರೆನಿಸಿರುವ ನಾ.ಡಿಸೋಜಾ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರವಾದ ಸಾಹಿತ್ಯ ಕೃಷಿ ನಡೆಸಿದ್ದಾರೆ ಎಂದರು.

ತಮ್ಮೆಲ್ಲ ಕಥೆ, ಕಾದಂಬರಿಗಳ ಮೂಲಕ ಪರಿಸರ ಸಂರಕ್ಷಣೆಯ ಬಗ್ಗೆ ಎಚ್ಚರಿಸುತ್ತ ಬಂದಿದ್ದು, ಪರಿಸರ ನಾಶವೇ ಮಾನವ ಜನಾಂಗದ ವಿನಾಶದ ಮೂಲ, ಪರಿಸರವನ್ನುಳಿಸಿಕೊಂಡು ಬಾಳಿದರೆ ಮಾನವನ ಬಾಳು ಸಂತುಷ್ಟ ಎಂಬುದನ್ನು ಮತ್ತೆ ಮತ್ತೆ ಪ್ರಸ್ತಾಪಿಸಿದ್ದಾರೆ ಎಂದು ಕಾಮತ್ ಅವರು ಹೇಳಿದರು.

ಮಡಿಕೇರಿಯಲ್ಲಿ ನಡೆದ 80 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಮರ್ಥವಾಗಿ ಸಮ್ಮೇಳನವನ್ನು ನಡೆಸಿಕೊಟ್ಟ ಖ್ಯಾತಿ ನಾ.ಡಿಸೋಜಾ ಅವರದ್ದು. ಸಮ್ಮೇಳನದ ನೆನಪಿಗೋಸ್ಕರ ಸಮ್ಮೇಳನ ಅಧ್ಯಕ್ಷರ ಹೆಸರಿನಲ್ಲಿ ಸಾಹಿತ್ಯ ಪರಿಷತ್ತು ದತ್ತಿ ಸ್ಥಾಪಿಸಿದ್ದು ಮಕ್ಕಳಲ್ಲಿ ಸಾಹಿತ್ಯದ ಚಿಂತನೆ ಮೂಡಬೇಕು ಎನ್ನುವುದು ಈ ದತ್ತಿಯ ಉದ್ದೇಶ ಎಂದರು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಪೆÇ್ರ ತಿಪ್ಪೇಸ್ವಾಮಿಯವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಬೆಳಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉತ್ತಮ ಕಾರ್ಯಕ್ರಮ ಆಯೋಜಿಸಿದೆ ಎಂದರು.

ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಮತ್ತು ಬೆಳೆಸಲು ಇಂತಹ ಕಾರ್ಯಕ್ರಮಗಳು ಜಿಲ್ಲೆಯ ಎಲ್ಲ ವಿದ್ಯಾ ಸಂಸ್ಥೆಗಳಲ್ಲಿ ಆಗಬೇಕು ಎಂದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್ ರವರು ಮಾತನಾಡಿ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಯಬೇಕು ಎನ್ನುವ ಉದ್ದೇಶದಿಂದ ಸಾಹಿತ್ಯ ಪರಿಷತ್ತು ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ ಎಂದರು.

ನಾ.ಡಿಸೋಜಾ ಅವರು ಸರ್ವಾಧ್ಯಕ್ಷರಾಗಿದ್ದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 2014ರಲ್ಲಿ ಇದೇ ಕಾಲೇಜಿನಲ್ಲಿ ನಡೆಸಲಾಗಿತ್ತು. ಲಕ್ಷಾಂತರ ಕನ್ನಡಿಗರು ಆ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡಿ ಸಮ್ಮೇಳನಕ್ಕೆ ಆಗಮಿಸಿದ ಕನ್ನಡದ ಹಲವಾರು ಹಿರಿಯ ಸಾಹಿತಿಗಳನ್ನು ಭೇಟಿಯಾಗಿದ್ದ ಸಂದರ್ಭ ತಾವು ಅಧ್ಯಕ್ಷರಾಗಿದ್ದು ಒಂದು ಸುಯೋಗ ಎಂದು ನೆನಪಿಸಿಕೊಂಡರು.

ದತ್ತಿಯ ಆಶಯದಂತೆ ವಿದ್ಯಾರ್ಥಿಗಳಿಗೆ ಗಾಯನ ಮತ್ತು ನೃತ್ಯ ಸ್ಪರ್ಧೆ ಜರುಗಿತು. ಗಾಯನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ವಿದ್ಯಾರ್ಥಿನಿ ಕು.ಚೊಂದಮ್ಮ ಎಂ.ಯು ಪಡೆದುಕೊಂಡರೆ, ದ್ವಿತೀಯ ಬಹುಮಾನವನ್ನು ಕು.ಸಪ್ನಾ ಎಂ ಶೇಟ್ ರವರು ಪಡೆದುಕೊಂಡರು. ತೃತೀಯ ಬಹುಮಾನವನ್ನು ಕು. ಮಣಿಕಂಠ ರವರು ಪಡೆದುಕೊಂಡರು. ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಲಕ್ಷ್ಮಿ ಆರ್. ಮತ್ತು ಹರ್ಷಿತಾ ಎಂ.ಸಿ. ಪಡೆದುಕೊಂಡರೆ ದ್ವಿತೀಯ ಬಹುಮಾನವನ್ನು ತುಳಸಿ ಮತ್ತು ಅರ್ಪಿತ ಪಡೆದುಕೊಂಡರು. ತೃತೀಯ ಬಹುಮಾನವನ್ನು ಹರ್ಷಿತ ಅವರು ಪಡೆದುಕೊಂಡರು.

19 ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಕೊಡಗು ಜಿಲ್ಲಾ ಬರಹಗಾರರ ಸಂಘದ ಅಧ್ಯಕ್ಷರಾದ ಪುದಿಯನೆರವನ ರೇವತಿ ರಮೇಶ್, ಗೌರವ ಕೋಶಾಧಿಕಾರಿ ಎಸ್.ಎಸ್.ಸಂಪತ್ ಕುಮಾರ್, ಎಫ್.ಎಂ.ಸಿ ಕಾಲೇಜಿನ ವಿದ್ಯಾರ್ಥಿ ಸಂಘದ ಸಂಯೋಜಕರು, ಪ್ರಾಧ್ಯಾಪಕರು ಆಗ ಡಾ.ಎ.ಎನ್.ಗಾಯತ್ರಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರುಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾಲೇಜಿನ ವಿದ್ಯಾರ್ಥಿನಿ ಕು.ಅರ್ಪಿತಾ ರವರು ನಿರೂಪಿಸಿದರು. ರೇವತಿ ರಮೇಶ್ ಸ್ವಾಗತಿಸಿದರೆ, ಕು.ಎಮ್.ಯು ಚೊಂದಮ್ಮ ನಾಡಗೀತೆ ಹಾಡಿದರು ಉಪನ್ಯಾಸಕರ ಪರಿಚಯವನ್ನು ಕು.ಸಂಧ್ಯಾರವರು ನೆರವೇರಿಸಿದರು. ವಂದನಾರ್ಪಣೆ ಕಾರ್ಯಕ್ರಮ ಸಂಯೋಜಕರ ಪ್ರಾಧ್ಯಾಪಕರು ಆದ ಡಾ.ಎ.ಎನ್ ಗಾಯತ್ರಿ ನೆರೆವೇರಿಸಿದರು.

Share this article

ಟಾಪ್ ನ್ಯೂಸ್

More News