ಜನವಾಹಿನಿ NEWS ಸಿದ್ದಾಪುರ: ಪಟ್ಟಣದಲ್ಲಿ ಭಾನುವಾರ ಅಪ್ರಾಪ್ತ ಬಾಲಕನೊಬ್ಬ ಕಾರು ಚಾಲನೆ ಮಾಡುತ್ತಿದ್ದ ದೃಶ್ಯ ಕಂಡು ಬಂದಿದ್ದು, ಸಾರಿಗೆ ನಿಯಮಗಳನ್ನು ಉಲ್ಲಂಘಿಸಿ ಅಪ್ರಾಪ್ತನಿಗೆ ಕಾರು ನೀಡಿದ ಆರೋಪದ ಮೇಲೆ ಕಾರಿನ ಮಾಲೀಕನ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾರತದಲ್ಲಿ ಅಪ್ರಾಪ್ತ ವಯಸ್ಕರು (18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) ವಾಹನ ಚಾಲನೆ ಮಾಡುವುದು ಕಾನೂನುಬಾಹಿರ ಮತ್ತು ಗಂಭೀರ ಅಪರಾಧವಾಗಿದೆ. ಮೋಟಾರು ವಾಹನಗಳ ಕಾಯ್ದೆಯ ಪ್ರಕಾರ, ಅಪ್ರಾಪ್ತ ಬಾಲಕನಿಗೆ ಕಾರು ನೀಡಿದಕ್ಕಾಗಿ ಕಾರನ್ನು ಮುಟ್ಟುಗೋಲು ಹಾಕಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಚಾಲನಾ ಪರವಾನಗಿ ಇಲ್ಲದ ಅಪ್ರಾಪ್ತರಿಂದ ವಾಹನ ಚಲಾವಣೆ ಮಾಡಿಸುವುದು ಮೋಟಾರು ವಾಹನ ಕಾಯ್ದೆಯಡಿ ಅಪರಾಧವಾಗಿದೆ. ಪೋಷಕರು ಮತ್ತು ವಾಹನ ಮಾಲೀಕರು ಈ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕು. ಅಪ್ರಾಪ್ತರಿಗೆ ವಾಹನಗಳನ್ನು ನೀಡಬೇಡಿ. ಇದು ಅವರ ಜೀವಕ್ಕೆ ಮಾತ್ರವಲ್ಲದೆ ರಸ್ತೆಯಲ್ಲಿ ಹೋಗುವ ಇತರರ ಜೀವಕ್ಕೂ ಅಪಾಯಕಾರಿ. ಕಾನೂನು ಪಾಲಿಸಿ, ಸುರಕ್ಷಿತವಾಗಿರಿ. ತಪ್ಪಿದ್ದಲ್ಲಿ ಭಾರಿ ದಂಡ ಜತೆಗೆ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ ಎಂದು ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.






