ಜನವಾಹಿನಿ NEWS ಮಡಿಕೇರಿ : ಕಾಫಿ ತೋಟದ ಮಧ್ಯೆ ಹೆಣ್ಣಾನೆಯೊಂದ ಸಂಶಯಾಸ್ಪದ ರೀತಿಯಲ್ಲಿ ಸತ್ತು ಬಿದ್ದಿರೋ ಘಟನೆ ವಿರಾಜಪೇಟೆ ತಾಲೂಕಿನ ಆನಂದಪುರ ಸಮೀಪದ ಕೌರಿಕಾಡು ಎಸ್ಟೇಟಿನಲ್ಲಿ ನಡೆದಿದೆ.
ತಾಯಿಯನ್ನು ಕಳೆದುಕೊಂಡಿರೋ ಮರಿಯಾನೆ ಜಾಗ ಬಿಟ್ಟು ಕದಲದೆ ಕಣ್ಣೀರು ಹಾಕುತ್ತಾ ಸೊಂಡಿಲಿನಿಂದ ಮೃತ ದೇಹವನ್ನು ಸ್ಪರ್ಶಿಸುತ್ತಿದ್ದು, ಮುಕರೋಧನೆ ಅನುಭವಿಸುತ್ತಿರುವುದು ಎಲ್ಲರ ಮನಕಲಕುವಂತೆ ಮಾಡಿದೆ.
ಇನ್ನೂ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿರೋ ಆನೆ ಗುಂಡು ತಗಲಿ ಸತ್ತಿದೆಯೋ ಅಥವಾ ಅನಾರೋಗ್ಯದ ಕಾರಣದಿಂದ ಮೃತ ಪಟ್ಟಿರಬಹುದೇ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಉದ್ಭವಿಸಿದ್ದು, ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಆನೆ ಸಾವಿಗೆ ನಿಖರ ಕಾರಣ ತಿಳಿದು ಬರಬೇಕಿದೆ.
ಆನೆ ಚೀರಾಟ ಕೇಳಿ ಸ್ಥಳಕ್ಕೆ ತೆರಳಿದ ಸಾರ್ವಜನಿಕರಿಗೆ ಆನೆಯೊಂದು ಸತ್ತು ಬಿದ್ದಿದ್ದು, ಪಕ್ಕದಲ್ಲೇ ಮರಿಯಾನೆ ಚಿರಾಡೋ ದೃಶ್ಯ ಕಂಡುಬಂದಿದೆ. ಕೂಡಲೇ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






