ಜನವಾಹಿನಿ NEWS ಮಡಿಕೇರಿ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಡಗು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ವತಿಯಿಂದ ಪೆÇಲೀಸ್ ಇಲಾಖೆಯ ಸಿಬ್ಬಂದಿಗಾಗಿ ಸಮಗ್ರ ಆರೋಗ್ಯ ಶಿಬಿರವು ನಗರದ ಮೈತ್ರಿ ಹಾಲ್‍ನಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮವನ್ನು ಡಿಎಆರ್ ಪೆÇಲೀಸ್ ಇನ್ಸ್‍ಪೆಕ್ಟರ್ ಗಣೇಶ್ ಹಾಗೂ ಕೊಡಗು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಸನತ್ ಕುಮಾರ್ ಅವರು ಜಂಟಿಯಾಗಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಸನತ್ ಕುಮಾರ್ ಅವರು, ಪೊಲೀಸ್ ಸಿಬ್ಬಂದಿ ತಮ್ಮ ಕರ್ತವ್ಯದ ಒತ್ತಡದ ನಡುವೆಯೂ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕೆಂದು ತಿಳಿಸಿದರು.
ಎಚ್‍ಐವಿ, ಸಿಫಿಲಿಸ್, ಕ್ಷಯರೋಗ, ವೈರಲ್ ಹೆಪಟೈಟಿಸ್ ರೋಗಗಳ ಬಗ್ಗೆ ಜಾಗೃತಿ ಹೊಂದುವುದರ ಜೊತೆಗೆ ಮಧುಮೇಹ, ರಕ್ತದೊತ್ತಡ ಮೊದಲಾದ ತಪಾಸಣೆಯನ್ನು ನಿಯಮಿತವಾಗಿ ಮಾಡಿಸಿಕೊಳ್ಳುವ ಅಗತ್ಯ ವಿವರಿಸಿದರು.
ಡಿಎಆರ್ ಪೊಲೀಸ್ ಇನ್ಸ್ಪೆಕ್ಟರ್ ಗಣೇಶ್ ಅವರು ಮಾತನಾಡಿ, ಪೊಲೀಸ್ ಸಿಬ್ಬಂದಿಯ ಆರೋಗ್ಯ ರಕ್ಷಣೆಗಾಗಿ ಇಂತಹ ಸಮಗ್ರ ಆರೋಗ್ಯ ಶಿಬಿರಗಳು ಅತ್ಯಂತ ಉಪಯುಕ್ತವಾಗಿದ್ದು, ಪ್ರತಿಯೊಬ್ಬ ಸಿಬ್ಬಂದಿಯೂ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಶಿಬಿರದಲ್ಲಿ ಕ್ಷಯರೋಗ, ವೈರಲ್ ಹೆಪಟೈಟಿಸ್, ಮಧುಮೇಹ, ರಕ್ತದೊತ್ತಡ ಸೇರಿದಂತೆ ಅಸಾಂಕ್ರಾಮಿಕ ರೋಗಗಳ ತಪಾಸಣೆ ಹಾಗೂ ಸಾಮಾನ್ಯ ಆರೋಗ್ಯ ತಪಾಸಣೆ ನಡೆಸಲಾಯಿತು. ಅಲ್ಲದೆ, ಆರೋಗ್ಯ ಶಿಕ್ಷಣ, ಸಮಾಲೋಚನೆ, ಅಗತ್ಯವಿರುವವರಿಗೆ ಪ್ರಯೋಗಾಲಯ ಪರೀಕ್ಷೆಗಳು ಹಾಗೂ ಮುಂದಿನ ಚಿಕಿತ್ಸೆಗೆ ಸೂಕ್ತ ಮಾರ್ಗದರ್ಶನ ನೀಡಲಾಯಿತು.
ಈ ಸಂದರ್ಭದಲ್ಲಿ ಐಸಿಟಿಸಿ ಸಲಹೆಗಾರ್ತಿ ಅನಿತಾ ಕುಮಾರಿ ಅವರು ಮೋಬಿಲೈಸೇಶನ್ ಏಡ್ಸ್ ಸುರಕ್ಷಾ ಕಾರ್ಯಕ್ರಮ ಹಾಗೂ ಸ್ವಯಂ ಎಚ್‍ಐವಿ ಪರೀಕ್ಷೆ ಮಾಡುವ ವಿಧಾನ ಕುರಿತು ವಿವರವಾಗಿ ಮಾಹಿತಿ ನೀಡಿದರು. ಈ ಡಿಜಿಟಲ್ ಉಪಕ್ರಮಗಳು ಎಚ್‍ಐವಿ ಪರೀಕ್ಷೆ ಮತ್ತು ಜಾಗೃತಿ ಹೆಚ್ಚಿಸಲು ಸಹಾಯಕವಾಗಿವೆ ಎಂದು ತಿಳಿಸಿದರು.
ಈ ಆರೋಗ್ಯ ಶಿಬಿರದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉತ್ಸಾಹದಿಂದ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಕಾರ್ಯಕ್ರಮದಲ್ಲಿ ಐಸಿಟಿಸಿ, ಡಿಎಸ್‍ಆರ್‍ಸಿ, ಎನ್‍ಟಿಇಪಿ, ಎನ್‍ಸಿಡಿ, ಆರ್‍ಬಿಎಸ್‍ಕೆ ಹಾಗೂ ಎನ್‍ವಿಎಚ್‍ಸಿಪಿ ಕಾರ್ಯಕ್ರಮಗಳ ವೈದ್ಯರು, ಆರೋಗ್ಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಪೊಲೀಸ್ ಸಿಬ್ಬಂದಿಯ ಆರೋಗ್ಯ ಸಂರಕ್ಷಣೆ, ರೋಗಗಳ ಆರಂಭಿಕ ಪತ್ತೆ ಮತ್ತು ಆರೋಗ್ಯ ಜಾಗೃತಿ ಹೆಚ್ಚಿಸುವ ಉದ್ದೇಶದಿಂದ ಆಯೋಜಿಸಲಾದ ಈ ಸಮಗ್ರ ಆರೋಗ್ಯ ಶಿಬಿರವು ಯಶಸ್ವಿಯಾಗಿ ನೆರವೇರಿತು.







