ಜನವಾಹಿನಿ NEWS ಸಿದ್ದಾಪುರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ನ ಮಡಿಕೇರಿ ತಾಲೂಕು ವ್ಯಾಪ್ತಿಯ ಸಿದ್ದಾಪುರ ವಲಯದ ಕಾರ್ಯಕ್ಷೇತ್ರದಲ್ಲಿ ನೂತನ ಡಿಜಿಟಲ್ ಪೇ ಸೇವೆಗೆ ಪಟ್ಟಣದ ಕಚೇರಿಯಲ್ಲಿ ಚಾಲನೆ ನೀಡಲಾಯಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಇದೇ ಪ್ರಥಮ ಬಾರಿಗೆ ಆರಂಭಗೊಂಡಿರುವ ಡಿಜಿ ಪೇ ಸೇವೆಯನ್ನು ಉದ್ಘಾಟಿಸಿ ಮಾತನಾಡಿದ ತಾಲ್ಲೂಕು ಯೋಜನಾಧಿಕಾರಿ ಪುರುಷೋತ್ತಮ, ಡಿಜಿ ಪೇ ಸೇವೆಯು ಗ್ರಾಮೀಣ ಭಾಗದ ಜನರಿಗೆ ಅತ್ಯಂತ ಸಹಕಾರಿಯಾಗಲಿದೆ. ವಾರದ ನಗದು ಸಂಗ್ರಹಣೆ ದಿನದಂದು ಸದಸ್ಯರು ತಮ್ಮ ಎಟಿಎಂ ಕಾರ್ಡ್ ಅಥವಾ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ ಬಳಸಿ ಬ್ಯಾಂಕ್ ಖಾತೆಯಿಂದ ಸುಲಭವಾಗಿ ₹500 ರಿಂದ ₹10 ಸಾವಿರ ವರೆಗೆ ನಗದು ಪಡೆಯಬಹುದು’ ಎಂದರು.
‘ಈ ಡಿಜಿಟಲ್ ಸೇವೆಯು ಪ್ರತಿಯೊಬ್ಬ ಗ್ರಾಮೀಣ ಜನರಿಗೂ ತಲುಪಬೇಕು. ಈ ಬಗ್ಗೆ ಒಕ್ಕೂಟದ ಸಭೆಗಳಲ್ಲಿ ಜನರಿಗೆ ಹೆಚ್ಚಿನ ಮಾಹಿತಿ ನೀಡಬೇಕು’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷ, ವಲಯ ಮೇಲ್ವಿಚಾರಕ, ಹಣಕಾಸು ಪ್ರಬಂಧಕ, ತಾಲ್ಲೂಕು ನೋಡಲ್ ಅಧಿಕಾರಿ, ವಲಯದ ಸೇವಾ ಪ್ರತಿನಿಧಿಗಳು, ಸುವಿಧಸಹಾಯಕರು ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು







