Breaking News :

ಚೆಯ್ಯಂಡಾಣೆಯಲ್ಲಿ ರಾಜ್ಯೋತ್ಸವ ಕ್ರೀಡಾಕೂಟ – ನರಿಯಂದಡ, ಕೊಕೇರಿ ಹಾಗೂ ಚೇಲಾವರ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ; ಹಾಕಿ ಫೈನಲ್‌ನಲ್ಲಿ ಕೊಕೇರಿ ಚಾಂಪಿಯನ್

 


ಜನವಾಹಿನಿ ನ್ಯೂಸ್ ಚೆಯ್ಯಂಡಾಣೆ : ಕನ್ನಡ ರಾಜ್ಯೋತ್ಸವದ ಅಂಗವಾಗಿ ಚೆಯ್ಯಂಡಾಣೆ ರಾಜ್ಯೋತ್ಸವ ಕ್ರೀಡಾ ಸಮಿತಿಯ ವತಿಯಿಂದ ಚೆಯ್ಯಂಡಾಣೆ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿರುವ ರಾಜ್ಯೋತ್ಸವ ಕ್ರೀಡಾ ಸಂಭ್ರಮದಿಂದ ನಡೆಯುತ್ತಿದೆ.

ಕ್ರೀಡಾಕೂಟವು ಚೆಯ್ಯಂಡಾಣೆ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ. ನರಿಯಂದಡ, ಕೊಕೇರಿ ಹಾಗೂ ಚೇಲಾವರ ಗ್ರಾಮಗಳ ತಂಡಗಳು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಕ್ರೀಡಾಸ್ಫೂರ್ತಿಯೊಂದಿಗೆ ಗೆಲುವಿಗಾಗಿ ಸೆಣಸಾಡುತ್ತಿವೆ.

ಕ್ರೀಡಾಕೂಟದ ಮೊದಲ ದಿನ ಹಾಕಿ, ತ್ರೋಬಾಲ್, ವಾಲಿಬಾಲ್, ಟೆನ್ನಿಕಾಯ್ಟ್ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು. ಮೂರು ಗ್ರಾಮಗಳ ತಂಡಗಳು ಸಮಬಲದ ಪೈಪೋಟಿ ನೀಡುವ ಮೂಲಕ ಕ್ರೀಡಾಭಿಮಾನಿಗಳ ಗಮನ ಸೆಳೆದವು.

ಹಾಕಿಯಲ್ಲಿ ಕೊಕೇರಿ ತಂಡಕ್ಕೆ ಪ್ರಶಸ್ತಿ

ನರಿಯಂದಡ ಹಾಗೂ ಕೊಕೇರಿ ತಂಡಗಳ ನಡುವಿನ ಮೊದಲ ಹಾಕಿ ಪಂದ್ಯಕ್ಕೆ ಚೇನಂಡ ಜೆಪ್ಪು ದೇವಯ್ಯ ಹಾಗೂ ಮಚ್ಚಂಡ ರಂಜು ಚಂಗಪ್ಪ ಅವರು ಸ್ಟಿಕ್ ಮೂಲಕ ಚೆಂಡನ್ನು ಚಲಾಯಿಸುವ ಮೂಲಕ ಚಾಲನೆ ನೀಡಿದರು. ಪಂದ್ಯದಲ್ಲಿ ಕೊಕೇರಿ ತಂಡವು ನರಿಯಂದಡ ತಂಡವನ್ನು 4-1 ಗೋಲುಗಳ ಅಂತರದಿಂದ ಸೋಲಿಸಿ ಫೈನಲ್ ಪ್ರವೇಶಿಸಿತು.

ಫೈನಲ್ ಪಂದ್ಯದಲ್ಲಿ ಚೇಲಾವರ ತಂಡವನ್ನು 3-0 ಗೋಲುಗಳಿಂದ ಮಣಿಸಿದ ಕೊಕೇರಿ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು. ಚೇಲಾವರ ತಂಡ ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು.

ಇತರ ಸ್ಪರ್ಧೆಗಳ ಫಲಿತಾಂಶ

ತ್ರೋಬಾಲ್‌ನಲ್ಲಿ ಚೇಲಾವರ ಹಾಗೂ ನರಿಯಂದಡ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ ಚೇಲಾವರ ತಂಡ ಫೈನಲ್ ಪ್ರವೇಶಿಸಿತು. ಫೈನಲ್‌ನಲ್ಲಿ ಕೊಕೇರಿ ತಂಡವನ್ನು ಎದುರಿಸಲಿದೆ.

ಪುರುಷರ ವಾಲಿಬಾಲ್‌ನಲ್ಲಿ ನರಿಯಂದಡ ತಂಡವು ಚೇಲಾವರ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದು, ಪ್ರಶಸ್ತಿಗಾಗಿ ಕೊಕೇರಿ ತಂಡದ ವಿರುದ್ಧ ಸೆಣಸಾಡಲಿದೆ.

ಟೆನ್ನಿಕಾಯ್ಟ್‌ನಲ್ಲಿ ಕೊಕೇರಿ ತಂಡದ ವಿರುದ್ಧ ಜಯ ಸಾಧಿಸಿದ ಚೇಲಾವರ ತಂಡ ಫೈನಲ್‌ಗೆ ಅರ್ಹತೆ ಪಡೆದುಕೊಂಡಿತು. ಫೈನಲ್‌ನಲ್ಲಿ ನರಿಯಂದಡ ತಂಡವನ್ನು ಎದುರಿಸಲಿದೆ.

ಮಹಿಳೆಯರ ಹಗ್ಗಜಗ್ಗಾಟದಲ್ಲಿ ಕೊಕೇರಿ ಹಾಗೂ ನರಿಯಂದಡ ತಂಡಗಳ ನಡುವೆ ನಡೆದ ರೋಚಕ ಸ್ಪರ್ಧೆಯಲ್ಲಿ ಜಯಗಳಿಸಿದ ಕೊಕೇರಿ ತಂಡ ಫೈನಲ್ ಪ್ರವೇಶಿಸಿತು.

ಈ ಸಂದರ್ಭದಲ್ಲಿ ಚೇನಂಡ ಜೆಪ್ಪು ದೇವಯ್ಯ, ಮಚ್ಚಂಡ ರಂಜು ಚಂಗಪ್ಪ, ನರಿಯಂದಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ, ರಾಜ್ಯೋತ್ಸವ ಕ್ರೀಡಾ ಸಮಿತಿಯ ಅಧ್ಯಕ್ಷ ಚೇನಂಡ ಸಂಪತ್, ಉಪಾಧ್ಯಕ್ಷ ಚೆಯ್ಯಂಡ ನಂದ ನಾಚಪ್ಪ, ಕಾರ್ಯದರ್ಶಿ ಕುಟ್ಟನ ಸುನಿಲ್, ಕೋಶಾಧಿಕಾರಿ ಬಿದ್ದಂಡ ನಮೂ ಚಿಯಣ್ಣ, ಸಂಚಾಲಕ ಬೆಳಿಯಂಡ್ರ ಹರಿಪ್ರಸಾದ್, ಬಿದ್ದಂಡ ರಾಜೇಶ್ ಆಚಯ್ಯ, ಚೇರುವಾಳಂಡ ಆಶಾ, ಶಿಕ್ಷಕಿ ಚೆಯ್ಯಂಡ ಲೀಲಾವತಿ, ಕ್ರೀಡಾಕೂಟ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ತಾ :7 ರ ಇಂದಿನ ಫೈನಲ್ ಪಂದ್ಯಗಳು


ತ್ರೋಬಾಲ್: ಕೊಕೇರಿ vs ಚೇಲಾವರ.

ವಾಲಿಬಾಲ್: ನರಿಯಂದಡ vs ಕೊಕೇರಿ.

ಟೆನ್ನಿಕಾಯ್ಟ್: ನರಿಯಂದಡ vs ಚೇಲಾವರ.

ಹಗ್ಗಜಗ್ಗಾಟ: ಕೊಕೇರಿ vs ಚೇಲಾವರ.

 

Share this article

ಟಾಪ್ ನ್ಯೂಸ್

More News