Breaking News :

ಬಿಜೆಪಿ ಆಡಳಿತ ವೈಫಲ್ಯ ಖಂಡಿಸಿ ಮಡಿಕೇರಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ – 5 ವರ್ಷ ಶೂನ್ಯ ಸಾಧನೆ ಆರೋಪ

 


ಜನವಾಹಿನಿ ನ್ಯೂಸ್ ಮಡಿಕೇರಿ : ನಗರಸಭೆಯ ಬಿಜೆಪಿ ಆಡಳಿತಾವಧಿ ಪೂರ್ಣಗೊಂಡಿದ್ದು, ಕಳೆದ ಐದು ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ನಡೆದಿಲ್ಲ ಎಂದು ಆರೋಪಿಸಿ ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ನಗರಸಭೆಯವರೆಗೆ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಬಿಜೆಪಿ ಆಡಳಿತದ ವೈಫಲ್ಯವನ್ನು ಖಂಡಿಸಿದರು.

ಬಿ.ವೈ.ರಾಜೇಶ್ ಆಕ್ರೋಶ : ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ವೈ.ರಾಜೇಶ್ ಮಾತನಾಡಿ, “ಬಿಜೆಪಿ ಆಡಳಿತ ಪೂರ್ಣಗೊಳ್ಳುವ ಮೂಲಕ ಮಡಿಕೇರಿ ನಗರಕ್ಕೆ ಅಂಟಿದ್ದ ಶಾಪ ವಿಮೋಚನೆಯಾಗಿದೆ. ಜನತೆ 16 ಸ್ಥಾನಗಳ ಬಹುಮತ ನೀಡಿದ್ದರೂ ನಿರೀಕ್ಷೆ ಹುಸಿ ಮಾಡಲಾಗಿದೆ. ಸದಸ್ಯರ ನಡುವಿನ ಭಿನ್ನಾಭಿಪ್ರಾಯ, ಗುಂಪುಗಾರಿಕೆಯಿಂದ ಅಭಿವೃದ್ಧಿಗೆ ಅಡ್ಡಿಯಾಗಿದೆ. ನಗರಸಭೆಯಲ್ಲಿ ಹಣವಿದ್ದರೂ ಕಾಮಗಾರಿ ಅನುಷ್ಠಾನಗೊಂಡಿಲ್ಲ. 5 ವರ್ಷ ಶೂನ್ಯ ಸಾಧನೆ” ಎಂದು ಟೀಕಿಸಿದರು.

ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರು ವಿಶೇಷ ಆಸಕ್ತಿ ವಹಿಸಿ ಮಂಜೂರು ಮಾಡಿಸಿದ 6.50 ಕೋಟಿ ರೂ. ಅನುದಾನದಲ್ಲಷ್ಟೇ ಕೆಲವು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಮುಂದಿನ ದಿನಗಳಲ್ಲಿ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಕಾಶ್ ಆಚಾರ್ಯ ಮಾತನಾಡಿ, “16 ಮಂದಿ ಬಿಜೆಪಿ ಸದಸ್ಯರ ಆಡಳಿತ ಮಂಡಳಿ ಗುಂಪುಗಾರಿಕೆಗೆ ಸೀಮಿತವಾಗಿತ್ತು. ಹದಗೆಟ್ಟ ರಸ್ತೆಗಳು, ಮೂಲಭೂತ ಸೌಕರ್ಯಗಳ ಕೊರತೆಯಿಂದ ಜನರ ನೆಮ್ಮದಿ ಹಾಳಾಗಿದೆ” ಎಂದು ಆರೋಪಿಸಿದರು.

ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಮಾತನಾಡಿ, “ಬಿಜೆಪಿ ಆಡಳಿತ ಮುಕ್ತಾಯ ನಗರದ ಪಾಲಿಗೆ ಶುಭಘಳಿಗೆ” ಎಂದರು.

ಪ್ರತಿಭಟನೆಯ ನೇತೃತ್ವವನ್ನು ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ ವಹಿಸಿದ್ದರು.

ಈ ಪ್ರತಿಭಟನೆಯಲ್ಲಿ ಕೆ.ಯು.ಅಬ್ದುಲ್ ರಜಾಕ್, ಚುಮ್ಮಿ ದೇವಯ್ಯ, ಬೊಳಿಯಂಡ ಗಣೇಶ್, ಕಾನೆಹಿತ್ತು ಮೊಣ್ಣಪ್ಪ, ಅಂಬೆಕಲ್ಲು ನವೀನ್ ಸೇರಿದಂತೆ ಮಡಿಕೇರಿ ನಗರ ಕಾಂಗ್ರೆಸ್ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Share this article

ಟಾಪ್ ನ್ಯೂಸ್

More News