ಜನವಾಹಿನಿ NEWS ಸಿದ್ದಾಪುರ : ಕೊಡಗಿನ ಮಾಲ್ದಾರೆ ಮೀಸಲು ಅರಣ್ಯ ಪ್ರದೇಶದ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಅನ್ಯ ಕೋಮಿನ ಕೆಲವರು ಕಬರ್ (ಗೋರಿ) ನಿರ್ಮಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವಾಹನ ಸಹಿತ 8 ಮಂದಿ ಆರೋಪಿಗಳನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ಹಿಂದೂ ಸಂಘಟನೆಗಳ ತೀವ್ರ ಪ್ರತಿಭಟನೆ ಹಾಗೂ ದೂರಿನ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ
ವಿರಾಜಪೇಟೆ ತಾಲೂಕಿನ ಮಾಲ್ದಾರೆ ಸಮೀಪದ ಶ್ರೀ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ತಾ. 26 ರಂದು ಯಾರೋ ಅನ್ಯಕೋಮಿನವರು ಗೋರಿ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿ ಹಿಂದೂಪರ ಸಂಘಟನೆಗಳು ದೇವಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದವು. ಅಲ್ಲದೆ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ದೂರಿನ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಮತ್ತು ಮಡಿಕೇರಿ ಭಾಗದ ಡಿ.ವೈ.ಎಸ್ಪಿ ಸೂರಜ್ ಮಾರ್ಗದರ್ಶನದಲ್ಲಿ ಸಿ.ಐ. ಚಂದ್ರಶೇಖರ್ ಮತ್ತು ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ತನಿಖೆ ಕೈಗೊಂಡ ಪೊಲೀಸರು ಪಿರಿಯಾಪಟ್ಟಣ ತಾಲೂಕಿನ ಆಯಾರಬೀಡು ಗ್ರಾಮದ ನಿವಾಸಿಗಳಾದ ಮುಜಾಮಿಲ್(32) ಅಶ್ವಿಕ್ ಪಾಷ(28) ರಶೀದ್ ಖಾನ್ ( 30) ಸೈಯದ್ ಸಾಧಿಕ್ (34) ಆಲಂ ಶರೀಫ್ (19) ತಂಜೀರ್ ಪಾಷ(30) ಮನ್ಸೂರ್ ಪಾಷ (33) ನಿಸಾರ್ ಅಹ್ಮದ್ (33) ಎಂಬವರುಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಅಲ್ಲದೆ ಅರಣ್ಯ ಪ್ರದೇಶದಲ್ಲಿ ಇರುವ ದೇವಾಲಯಕ್ಕೆ ಆಗಮಿಸಲು ಬಂದಂತಹ ಎರಡು ವಾಹನಗಳನ್ನು ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಶ್ರೀ ಸಿದ್ದೇಶ್ವರ ದೇವಾಲಯಕ್ಕೆ ಬರುವವರ ಮೇಲೆ ನಿಗಾ ವಹಿಸಲು ಮಾರ್ಗದ ರಸ್ತೆಯಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಲಾಗಿದೆ. ಅಲ್ಲದೆ ಅರಣ್ಯ ಇಲಾಖೆಯ ಎರಡು ಸಿಬ್ಬಂದಿಯನ್ನು ಹಗಲಿನ ವೇಳೆ ಗಸ್ತು ತಿರುಗಲು ಮತ್ತು ಕಾವಲು ಕಾಯಲು ನಿಯೋಜನೆ ಮಾಡಲಾಗಿದೆ. ರಾತ್ರಿ ಸಮಯದಲ್ಲಿ ಕೂಡ ಮೀಸಲು ಅರಣ್ಯ ಪ್ರದೇಶದಲ್ಲಿ ವಾಹನದಲ್ಲಿ ಗಸ್ತು ತಿರುಗಲು ಎರಡು ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.






